ಬುಮ್ರಾ ಮೇಲೆ ಹೆಚ್ಚಿನ ಹೊರೆ ಹಾಕಬಾರದು ; ನಮ್ಮಲ್ಲಿ ಭರವಸೆಯ ಬೌಲರ್‌ಗಳು ಸಾಕಷ್ಟಿದ್ದಾರೆ: ಗವಾಸ್ಕರ್

Update: 2025-01-07 16:24 GMT

 ಜಸ್‌ ಪ್ರಿತ್ ಬುಮ್ರಾ | PC : PTI 

ಹೊಸದಿಲ್ಲಿ: ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗುಣಮಟ್ಟದ ಬೌಲರ್‌ ಗಳಿದ್ದಾರೆ ಎಂದು ಹೇಳಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ತಲೆಮಾರಿಗೆ ಒಂದರಂತೆ ಲಭಿಸುವ ಜಸ್‌ ಪ್ರಿತ್ ಬುಮ್ರಾರಂತಹ ತಾರೆಯ ಮೇಲಿನ ಹೊರೆಯನ್ನು ಇಳಿಸಲು ಆ ಬೌಲರ್‌ ಗಳಿಗೆ ಅಗತ್ಯ ಅವಕಾಶಗಳನ್ನು ಕೊಡಬೇಕು ಎಂದು ಹೇಳಿದ್ದಾರೆ.

ಆದರೆ, ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ, ಭಾರತೀಯ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಬಲ್ಲ ಇಂಥ ಸಂಭಾವ್ಯ ಬೌಲರ್‌ಗಳನ್ನು ಹೆಸರಿಸುವುದರಿಂದ ಹಿಂದೆ ಸರಿದರು.

‘‘ಭಾರತದಲ್ಲಿ ತುಂಬಾ ಸಂಖ್ಯೆಯಲ್ಲಿ ಭರವಸೆಯ ವೇಗಿಗಳಿದ್ದಾರೆ. ಅವರು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಹೌದು, ಬುಮ್ರಾರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸಬಾರದು. ಇತರ ಬೌಲರ್‌ ಗಳು ತಮ್ಮ ನಿರ್ವಹಣೆಯ ಮಟ್ಟವನ್ನು ಹೆಚ್ಚಿಸಿದರೆ, ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯಗಳನ್ನು ಗೆಲ್ಲಬಲ್ಲ ಬೌಲಿಂಗ್ ದಾಳಿಯನ್ನು ನಾವು ಹೊಂದಬಹುದಾಗಿದೆ’’ ಎಂದು ಅವರು ಹೇಳಿದರು.

ದೇಶೀಯ ಕ್ರಿಕೆಟ್‌ನಲ್ಲಿ ಕೆಲವು ಪ್ರತಿಭಾನ್ವಿತ ಆಟಗಾರರು ಹೊರಹೊಮ್ಮುತ್ತಿದ್ದಾರೆ ಹಾಗೂ ಅವರಿಗೆ ನ್ಯಾಯೋಚಿತ ಅವಕಾಶವನ್ನು ಕೊಡುವುದು ಆಯ್ಕೆಗಾರರ ಜವಾಬ್ದಾರಿಯಾಗಿದೆ ಎಂದು 75 ವರ್ಷದ ಗವಾಸ್ಕರ್ ಹೇಳಿದರು.

‘‘ಅವರಿಗೆ ಅವಕಾಶವನ್ನು ನೀಡದಿದ್ದರೆ, ರಣಜಿ ಟ್ರೋಫಿಯಲ್ಲಿ ಉತ್ತಮ ನಿರ್ವಹಣೆ ನೀಡುವವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನಿರ್ವಹಣೆ ನೀಡುತ್ತಾರೆಯೇ ಇಲ್ಲವೇ ಎನ್ನುವುದು ನಮಗೆ ತಿಳಿಯುವುದು ಹೇಗೆ? ಇಲ್ಲಿ ಉತ್ತಮ ಆಯ್ಕೆ ಕೆಲಸ ಮಾಡುತ್ತದೆ’’ ಎಂದರು.

ಈಗಷ್ಟೇ ಮುಗಿದ ಭಾರತದ ಆಸ್ಟ್ರೇಲಿಯ ಪ್ರವಾಸದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಜೊತೆಗೆ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿದ್ದಾರೆ. ರೆಡ್ಡಿಯಂಥ ಪ್ರತಿಭೆಯನ್ನು ಶೋಧಿಸಿರುವುದಕ್ಕಾಗಿ ಗವಾಸ್ಕರ್, ಆಯ್ಕೆ ಸಮಿತಿಯನ್ನು ಪ್ರಶಂಸಿಸಿದರು.

‘‘ನಿತೀಶ್ ಕುಮಾರ್ ರೆಡ್ಡಿಯ ಸಾಮರ್ಥ್ಯವನ್ನು ಪತ್ತೆಹಚ್ಚಿ ಟೆಸ್ಟ್ ತಂಡಕ್ಕೆ ಅವರನ್ನು ಆಯ್ಕೆ ಮಾಡಿರುವುದಕ್ಕಾಗಿ ಅಜಿತ್ ಅಗರ್ಕರ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’’ ಎಂದರು.

ಖ್ಯಾತನಾಮರಿಗೆ ಮಣೆ ಹಾಕುವ ಅಭ್ಯಾಸವು ಭಾರತೀಯ ಕ್ರಿಕೆಟ್ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ, ತನ್ನ ನಿರ್ವಹಣೆಯನ್ನು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಲು ಒಬ್ಬ ಆಟಗಾರನಿಗೆ ಸಾಧ್ಯವಾದರೆ, ಅಲ್ಲಿಂದ ಹೊರಬರಲು ಹೆಚ್ಚಿನ ಕಷ್ಟವಾಗದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News