ಗೋವಾ | ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ ; ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದತ್ತಾ ದಾಮೋದರ ನಾಯಕ್ ವಿರುದ್ಧ ಪ್ರಕರಣ

Update: 2025-01-07 16:32 GMT

 ದತ್ತಾ ದಾಮೋದರ ನಾಯಕ್| PC : FACE BOOK

ಪಣಜಿ: ಗೋವಾ ಪೋಲಿಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ದತ್ತಾ ದಾಮೋದರ ನಾಯಕ್ ಅವರ ವಿರುದ್ಧ ಸೋಮವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಉದ್ಯಮಿಯೂ ಆಗಿರುವ ನಾಯಕ್(70) ಇತ್ತೀಚಿಗೆ ಸಂದರ್ಶನವೊಂದರಲ್ಲಿ ದೇವಸ್ಥಾನದ ಅರ್ಚಕರನ್ನು ‘ಲೂಟಿಕೋರರು’ ಎಂದು ಕರೆದಿದ್ದಾರೆ ಎಂದು ಆರೋಪಿಸಿರುವ ದೂರುಗಳ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ತಾನು ಕಟ್ಟಾ ನಾಸ್ತಿಕನಾಗಿದ್ದೇನೆ ಮತ್ತು ತನ್ನ ವಿರುದ್ಧ ಪ್ರಕರಣದಿಂದ ಹೆದರುವುದಿಲ್ಲ ಎಂದು ನಾಯಕ್‌ ರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸತೀಶ ಭಟ್ ಎನ್ನುವವರು ಕಾಣಕೋಣ ಪೋಲಿಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ,‘ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಾಯಕ್ ಅವರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಅರ್ಚಕರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ನಾಸ್ತಿಕನಿರಲಿ ಅಥವಾ ಆಸ್ತಿಕನಿರಲಿ, ಪ್ರತಿಯೊಬ್ಬರ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ. ಆದರೆ ಈ ಹೇಳಿಕೆಗಳ ಮೂಲಕ ನಾಯಕ್ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಗೋಮಾಂತಕ ಮಂದಿರ ಮಹಾಸಂಘ ಮತ್ತು ಧಾರ್ಮಿಕ ಸಂಸ್ಥೆಗಳ ಒಕ್ಕೂಟಕ್ಕೆ ಸಂಬಂಧಿಸಿದ ವ್ಯಕ್ತಿಯೋರ್ವರು ಪಣಜಿ ಠಾಣೆಯಲ್ಲಿ ನಾಯಕ್ ವಿರುದ್ಧ ಇನ್ನೊಂದು ದೂರನ್ನು ದಾಖಲಿಸಿದ್ದಾರೆ. ಅರ್ಚಕರನ್ನು ‘ಲೂಟಿಕೋರರು’ ಎಂದು ಕರೆಯುವ ಮೂಲಕ ನಾಯಕ್ ಗಂಭೀರ ಅಪರಾಧವನ್ನು ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನಾನು ದೇವಸ್ಥಾನದ ಅರ್ಚಕರು ಜನರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದೆ,ನಂತರ ಅವರು ಭಕ್ತರಿಂದ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದೆ. ದೇವಸ್ಥಾನಗಳು ಹಣವನ್ನು ಸುಲಿಗೆ ಮಾಡುವುದು ನಿಜ. ಈ ಹಣದಿಂದ ಏನನ್ನಾದರೂ ನಿರ್ಮಿಸಲಾಗಿದೆಯೇ ಎಂದು ನಾನು ಪ್ರಶ್ನಿಸಿದ್ದೆ. ಅವರು ಶಾಲೆ,ಆಸ್ಪತ್ರೆಗಳನ್ನು ಕಟ್ಟಿದ್ದಾರೆಯೇ? ಈ ಎಲ್ಲ ಹಣ ಎಲ್ಲಿ ಹೋಗುತ್ತಿದೆ?’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಯಕ್ ಹೇಳಿದರು.

ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ತಾನು ಹೊಂದಿದ್ದೇನೆ ಮತ್ತು ತನ್ನ ವಿರುದ್ಧದ ಪ್ರಕರಣದಿಂದ ಹೆದರಿಕೊಂಡಿಲ್ಲ ಎಂದ ನಾಯಕ್,ನಾಸ್ತಿಕನಾಗಿ ನನ್ನ ಭಾವನೆಗಳ ಬಗ್ಗೆ ಏನು? ವೈಚಾರಿಕ ಚಿಂತನೆ ಮತ್ತು ಸಂವಾದಗಳಿಗೆ ಅವಕಾಶವು ಕುಗ್ಗುತ್ತಿದೆ ಎಂದರು.

ಕೊಂಕಣಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ನಾಯಕ್ 2006ರಲ್ಲಿ ತನ್ನ ‘ಜಾಯಿ ಕಾಯ್ ಜುಯಿ’ ಪ್ರಬಂಧ ಸಂಕಲನಕ್ಕಾಗಿ ಕೊಂಕಣಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

1990ರ ದಶಕದಲ್ಲಿ ಅವರು ಸಮತಾ ಆಂದೋಲನ ಎಂಬ ಗೋವಾ ಮೂಲದ ವಿಚಾರವಾದಿಗಳ ಗುಂಪನ್ನು ಹುಟ್ಟು ಹಾಕಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News