ಅಂಡಮಾನ್ ನಿಕೋಬಾರ್ : ಮೊದಲ ಬಾರಿಗೆ ಜಾರವ ಸಮುದಾಯದ ಮತದಾರರಿಗೆ ಗುರುತಿನ ಚೀಟಿ ವಿತರಣೆ
ಹೊಸದಿಲ್ಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ಜಾರವ ಸಮುದಾಯದ 19 ಮಂದಿ ಸದಸ್ಯರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಚಂದ್ರಭೂಷಣ್ ಕುಮಾರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಈ ಬುಡಕಟ್ಟು ಸಮುದಾಯದ 19 ಜನರಿಗೆ ಮೊದಲ ಬಾರಿಗೆ ವೋಟರ್ ಐಡಿಯನ್ನು ನೀಡಲಾಗಿದೆ. ಜಾರವ ಸಮುದಾಯಕ್ಕೂ ತಮ್ಮ ಹಕ್ಕು ಚಲಾಯಿಸುವ ಅವಕಾಶ ಸಿಗುವಂತೆ ಹೆಜ್ಜೆ ಇಟ್ಟಿದ್ದು ಐತಿಹಾಸಿಕ ನಡೆ ಎಂದು ಹೇಳಿದ್ದಾರೆ.
ಅಂಡಮಾನ್ ಆದಿಮ್ ಜನಜಾತಿ ವಿಕಾಸ ಸಮಿತಿಯು ಜರಾವಾ ಸಮುದಾಯಕ್ಕೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವನ್ನು ನೀಡುವ ಮೂಲಕ ಈ ಕಾರ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ವರದಿಯಾಗಿದೆ. ಜಾರವ ಸಮುದಾಯದ ವಿಶಿಷ್ಟ ಗುರುತು ಮತ್ತು ಖಾಸಗಿತನ ರಕ್ಷಣೆ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನದ ಹಕ್ಕು ನೀಡುವ ಮೂಲಕ ಸಮಾನತೆ ಕುರಿತು ದೇಶ ಹೊಂದಿರುವ ತನ್ನ ಬದ್ಧತೆಯನ್ನು ಪ್ರತಿಪಾದಿಸಲಾಗಿದೆ ಎಂದು ದಕ್ಷಿಣ ಅಂಡಮಾನ್ ಜಿಲ್ಲೆಯ ಚುನಾವಣಾ ಅಧಿಕಾರಿ ಅರ್ಜುನ್ ಶರ್ಮಾ ಹೇಳಿದ್ದಾರೆ.