ದಲ್ಲೆವಾಲ್ ಗೆ ಏನಾದರೂ ಸಂಭವಿಸಿದರೆ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರಕ್ಕೆ ಸಾಧ್ಯವಾಗದೇ ಇರಬಹುದು : ರೈತ ಮುಖಂಡರು
ಚಂಡೀಗಢ: ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ಏನಾದರೂ ಸಂಭವಿಸಿದರೆ , ಆ ನಂತರ ಉಂಟಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರಕ್ಕೆ ಸಾಧ್ಯವಾಗದೇ ಇರಬಹುದು ಎಂದು ಪಂಜಾಬ್ ರೈತ ಮುಖಂಡರು ಮಂಗಳವಾರ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಚಾಲಕರಾಗಿರುವ 70 ವರ್ಷದ ದಲ್ಲೆವಾಲ್ ಅವರು ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯಲ್ಲಿ ನವೆಂಬರ್ 26 ರಿಂದ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ಸೇರಿದಂತೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸೋಮವಾರ ಸಂಜೆ ದಲ್ಲೆವಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಎನ್‌ಜಿಒ '5 ರಿವರ್ಸ್ ಹಾರ್ಟ್ ಅಸೋಸಿಯೇಷನ್' ತಂಡದ ಭಾಗವಾಗಿರುವ ಡಾ ಅವತಾರ್ ಸಿಂಗ್ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ.
ಅವರ ರಕ್ತದೊತ್ತಡ ಕುಸಿದಿದ್ದು, ಹಾಸಿಗೆಯ ಮೇಲೆ ಮಲಗಿದ್ದಾಗ ವಾಂತಿ ಮಾಡಿಕೊಂಡರು ಎಂದು ವೈದ್ಯರು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಅವರ ಸ್ಥಿತಿ ಹದಗೆಡುತ್ತಿದ್ದು, ಅವರಿಗೆ ಏನು ಬೇಕಾದರೂ ಆಗಬಹುದು ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸರ್ಕಾರಿ ವೈದ್ಯರ ತಂಡ ಖಾನೌರಿ ಗಡಿಯಲ್ಲಿ ದಲ್ಲೆವಾಲ್‌ಗೂ ತಪಾಸಣೆ ನಡೆಸಿತು.
ಆಮರಣಾಂತ ಉಪವಾಸ ಮಂಗಳವಾರ 43ನೇ ದಿನಕ್ಕೆ ಕಾಲಿಟ್ಟಿದೆ. ದಲ್ಲೆವಾಲ್, ಇದುವರೆಗೆ ಯಾವುದೇ ವೈದ್ಯಕೀಯ ನೆರವು ಪಡೆಯಲು ನಿರಾಕರಿಸಿದ್ದಾರೆ.
ರೈತ ಮುಖಂಡ ಅಭಿಮನ್ಯು ಕೋಹರ್ ಮಾತನಾಡಿ, ಕೇಂದ್ರ ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಹರಿಸಬೇಕು. ಅವರ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. "ಅವರಿಗೆ ಏನು ಬೇಕಾದರೂ ಆಗಬಹುದು" ಎಂದು ಹೇಳಿದ್ದಾರೆ.
ಮಂಗಳವಾರವೂ ದಲ್ಲೆವಾಲ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ದಲ್ಲೆವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ಬಹುಶಃ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಪರಿಸ್ಥಿತಿ ಉಳಿಯದೇ ಇರಬಹುದು. ಪರಿಸ್ಥಿತಿ ಆ ಮಟ್ಟಕ್ಕೆ ಬರದಂತೆ ಕೇಂದ್ರ ಪ್ರಯತ್ನಿಸಬೇಕು ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ವ್ಯಕ್ತಿ ಆಮರಣಾಂತ ಉಪವಾಸ ಕುಳಿತಿರುವಾಗ ಸರ್ಕಾರ ಅವನ ಬಗ್ಗೆ ಗಮನ ಹರಿಸದಿರುವ ಸಂಸ್ಕೃತಿ ಬ್ರಿಟಿಷರ ಆಳ್ವಿಕೆಯಲ್ಲಿಯೂ ಇರಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಭಿಮನ್ಯು ಕೋಹರ್ ಕಿಡಿ ಕಾರಿದ್ದಾರೆ.
ರೈತರ ಬೇಡಿಕೆಗಳ ಬಗ್ಗೆ ಕೇಂದ್ರದ ಧೋರಣೆ ವಿರುದ್ಧ ಜನವರಿ 10 ರಂದು ದೇಶಾದ್ಯಂತ ಬಿಜೆಪಿ ಸರ್ಕಾರದ ಪ್ರತಿಕೃತಿ ದಹಿಸಲಾಗುವುದು.ದೇಶದ ರೈತರ ಭವಿಷ್ಯ ಉಳಿಸಲು ದಲ್ಲೆವಾಲ್ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
'ಕೃಷಿ ಮಾರುಕಟ್ಟೆಯ ರಾಷ್ಟ್ರೀಯ ನೀತಿ ಚೌಕಟ್ಟು' ಕರಡು ನೀತಿಯನ್ನು ಜನವರಿ 13 ರಂದು ಸುಡಲಾಗುವುದು. ಜನವರಿ 26 ರಂದು ದೇಶದಾದ್ಯಂತ ರೈತರ ಟ್ರ್ಯಾಕ್ಟರ್‌ಗಳು ರಸ್ತೆಗಿಳಿಯಲಿವೆ ಎಂದು ಅವರು ಮುಂದಿನ ಯೋಜನೆಯ ಕುರಿತು ಹೇಳಿದರು.
ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಆಯೋಜಿಸಿರುವ ಪ್ರತಿಭಟನೆಯಲ್ಲಿ ರೈತರು ದಿಲ್ಲಿಗೆ ಮೆರವಣಿಗೆಯನ್ನು ಹೋಗುತ್ತಿದ್ದಾಗ, ಭದ್ರತಾ ಪಡೆಗಳು ಅವರನ್ನು ತಡೆದ ನಂತರ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸೋಮವಾರ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ದಲ್ಲೆವಾಲ್ ಅವರನ್ನು ಭೇಟಿಯಾಗಿ ವೈದ್ಯಕೀಯ ನೆರವು ತೆಗೆದುಕೊಳ್ಳುವಂತೆ ಒತ್ತಾಯಿಸಿತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ ಪಂಜಾಬ್ ಸರ್ಕಾರವು ನೀಡಿದ ವೈದ್ಯಕೀಯ ನೆರವು ಪಡೆಯಲು ರೈತ ಮುಖಂಡ ದಲ್ಲೇವಾಲ್ ಇಲ್ಲಿಯವರೆಗೆ ನಿರಾಕರಿಸಿದ್ದಾರೆ