ಮುಸ್ಲಿಮ್ ವಿರೋಧಿ ಹೇಳಿಕೆ | ನ್ಯಾ.ಯಾದವ್ ವಿರುದ್ಧ ವಾಗ್ದಂಡನೆ ನಿರ್ಣಯ ಪ್ರಶ್ನಿಸಿದ್ದ ಅರ್ಜಿಗೆ ಅಲಹಾಬಾದ್ ಹೈಕೋರ್ಟ್ ತಿರಸ್ಕಾರ
ಪ್ರಯಾಗ್ ರಾಜ್: ಕಳೆದ ಡಿಸೆಂಬರ್‌ನಲ್ಲಿ ಮುಸ್ಲಿಮ್ ವಿರೋಧಿ ಹೇಳಿಕೆಗಳಿಗಾಗಿ ನ್ಯಾ.ಶೇಖರ್ ಕುಮಾರ್ ಯಾದವ್ ವಿರುದ್ಧ ಮಂಡಿಸಲಾದ ವಾಗ್ದಂಡನೆ ನಿರ್ಣಯವನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಅಲಹಾಬಾದ್ ಉಚ್ಛ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.
ಡಿ.8ರಂದು ವಿಹಿಂಪ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾ.ಯಾದವ್, ಭಾರತವು ತನ್ನ ಹಿಂದು ಬಹುಸಂಖ್ಯಾತರ ಇಚ್ಛೆಯಂತೆ ನಡೆಯಲಿದೆ ಎಂದು ಹೇಳಿದ್ದರು. ಮುಸ್ಲಿಮರ ವಿರುದ್ಧ ಕೋಮುದ್ವೇಷದ ಮಾತುಗಳನ್ನು ಆಡಿದ್ದ ಅವರು, ಮುಸ್ಲಿಮ್ ಸಮುದಾಯವು ದೇಶಕ್ಕೆ ಹಾನಿಕಾರಕವಾಗಿದೆ ಎಂದು ಬಣ್ಣಿಸಿದ್ದರು.
ಈ ಹೇಳಿಕೆಗಳು ನ್ಯಾ.ಯಾದವ್ ಅವರ ವಾಗ್ದಂಡನೆಗೆ ಒತ್ತಾಯಕ್ಕೆ ಕಾರಣವಾಗಿದ್ದವು. ಕೆಲವು ಟೀಕಾಕಾರರು ಅವರನ್ನು ನ್ಯಾಯಾಂಗ ಸೇವೆಯಿಂದ ಅಮಾನತುಗೊಳಿಸುವಂತೆ ಕರೆ ನೀಡಿದ್ದರು.
ಡಿ.13ರಂದು 55 ಪ್ರತಿಪಕ್ಷ ಸದಸ್ಯರು ನ್ಯಾ.ಯಾದವ್ ಅವರ ವಾಗ್ದಂಡನೆಗಾಗಿ ರಾಜ್ಯಸಭೆಯಲ್ಲಿ ನೋಟಿಸ್ ಸಲ್ಲಿಸಿದ್ದರು.
ರಾಜ್ಯಸಭೆಯ ಸಭಾಪತಿಗಳು ವಾಗ್ದಂಡನೆ ನಿರ್ಣಯದ ಮೇಲೆ ಕ್ರಮ ಕೈಗೊಳ್ಳುವುದನ್ನು ತಡೆಯುವಂತೆ ಕೋರಿ ವಕೀಲ ಅಶೋಕ ಪಾಂಡೆ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದರು.
ನ್ಯಾ.ಯಾದವ್ ಓರ್ವ ಹಿಂದುವಾಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದರು ಎಂದು ಅವರು ವಾದಿಸಿದ್ದರು. ಆದರೆ ಪಾಂಡೆಯವರ ಅರ್ಜಿಯು ಅಂಗೀಕಾರಾರ್ಹವಲ್ಲ ಎಂದು ಹೇಳಿದ ಉಚ್ಛ ನ್ಯಾಯಾಲಯವು ಅದನ್ನು ವಜಾಗೊಳಿಸಿತು.