ಚಾರ್‌ಧಾಮ್ ಹೆದ್ದಾರಿ ಸೇತುವೆಯಲ್ಲಿ ಟ್ರಾಲಿ ಕೇಬಲ್ ತುಂಡಾಗಿ ಕಾರ್ಮಿಕ ಮೃತ್ಯು
ಡೆಹ್ರಾಡೂನ್: ಚಾರ್‌ಧಾಮ್ ಹೆದ್ದಾರಿಯಲ್ಲಿ ಅಲಕಾನಂದ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಯಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಲಿಫ್ಟಿಂಗ್ ಟ್ರಾಲಿಯ ಕೇಬಲ್ ತುಂಡಾಗಿ ಸಂಭವಿಸಿದ ದುರಂತದಲ್ಲಿ ಉತ್ತರ ಪ್ರದೇಶದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.
ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯ ಭಾಗವಾದ ರುದ್ರ ಪ್ರಯಾಗ ಜಿಲ್ಲೆಯ ಗೌರಿಕುಂಡ ಮತ್ತು ಬದರೀನಾಥ ಹೆದ್ದಾರಿಯನ್ನು ಸಂಪರ್ಕಿಸುವ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
"ಲಿಫ್ಟಿಂಗ್ ಟ್ರಾಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಟ್ರಾಲಿಯಲ್ಲಿ ಸಿಕ್ಕಿಹಾಕಿಕೊಂಡ ನಾಲ್ಕು ಮಂದಿಯನ್ನು ಜಿಲ್ಲಾ ವಿಕೋಪ ಸ್ಪಂದನೆ ಪಡೆ ಮಧ್ಯರಾತ್ರಿವರೆಗೂ ನಡೆಸಿದ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಪಾರು ಮಾಡಿದೆ" ಎಂದು ರುದ್ರ ಪ್ರಯಾಗ ವಿಕೋಪ ನಿರ್ವಹಣೆ ಅಧಿಕಾರಿ ಎನ್.ಕೆ.ರಾಜ್ವಾರ್ ಹೇಳಿದ್ದಾರೆ.
ಮೃತ ವ್ಯಕ್ತಿಯನ್ನು ಸಹರಣಪುರ ಜಿಲ್ಲೆಯ ವಾಸಿಂ (40) ಎಂದು ಗುರುತಿಸಲಾಗಿದ್ದು, 28 ವರ್ಷದ ಪ್ರಿನ್ಸ್ ಎಂಬಾತನಿಗೆ ಗಾಯಗಳಾಗಿವೆ. ಪಕ್ಕದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಗಾಯಾಳು ಪ್ರಿನ್ಸ್ ನನ್ನು ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವಿವರಿಸಿದ್ದಾರೆ.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾಗಿ ಖಾಸಗಿ ಕಂಪನಿಯೊಂದು ಈ ಸೇತುವೆ ನಿರ್ಮಾಣ ಕಾರ್ಯ ನಿರ್ವಹಿಸುತ್ತಿದೆ.