ಅಸ್ಸಾಂ ಕಲ್ಲಿದ್ದಲು ಗಣಿ ದುರಂತ: ಮೂವರ ಮೃತದೇಹಗಳು ಪತ್ತೆ

Update: 2025-01-07 11:19 GMT

PC ; scroll.in

ಗುವಾಹಟಿ: ಸೋಮವಾರ ಅಸ್ಸಾಂ ರಾಜ್ಯದ ದೀಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊ ಪ್ರದೇಶದ ಕಲ್ಲಿದ್ದಲು ಗಣಿಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದೆ. ಇನ್ನೂ ಒಂಬತ್ತು ಮಂದಿ ಗಣಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಸರಕಾರಿ ವರದಿಯ ಪ್ರಕಾರ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ 30 ಸದಸ್ಯರ ತಂಡವೊಂದು ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದೆ. ಇದರೊಂದಿಗೆ, ರಾಜ್ಯ ವಿಪತ್ತು ಸ್ಪಂದನಾ ಪಡೆಯ ಎಂಟು ಸಿಬ್ಬಂದಿಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುವಂತೆ ನೌಕಾಪಡೆಯ ಮುಳುಗು ತಜ್ಞರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. “ಸ್ಥಳದಲ್ಲಿ ಬೀಡು ಬಿಟ್ಟಿರುವ ತಂಡದ ಮೌಲ್ಯಮಾಪನದ ಪ್ರಕಾರ, ಗಣಿಯೊಳಗಿನ ನೀರಿನ ಮಟ್ಟವು ಸುಮಾರು 100 ಅಡಿಗೆ ತಲುಪಿದೆ. ವಿಶಾಖಪಟ್ಟಣಂನಿಂದ ಮುಳುಗು ತಜ್ಞರು ಧಾವಿಸುತ್ತಿದ್ದು, ಅವರು ಆದಷ್ಟು ಶೀಘ್ರವಾಗಿ ಘಟನಾ ಸ್ಥಳ ತಲುಪುವ ನಿರೀಕ್ಷೆ ಇದೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇಘಾಲಯದ ಗಡಿಗೆ ಹೊಂದಿಕೊಂಡಿರುವ ಅಸ್ಸಾಂನ ಅಕ್ರಮ ಗಣಿಯೊಂದಕ್ಕೆ ನೀರು ನುಗ್ಗಿದ್ದರಿಂದ, ಸುಮಾರು 18 ಮಂದಿ ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ಎರಡು ಮೋಟರ್ ಪಂಪ್ ಗಳನ್ನು ಬಳಸಿ, ನೀರು ಹೊರ ಹಾಕುವ ಕೆಲಸಕ್ಕೆ ಚಾಲನೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News