ಅಸ್ಸಾಂ | ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ 9 ಕಾರ್ಮಿಕರ ಪೈಕಿ ಓರ್ವನ ಮೃತದೇಹ ಪತ್ತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಗುವಾಹಟಿ: ಅಸ್ಸಾಂನ ದೀಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊ ಪ್ರದೇಶದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಒಂಬತ್ತು ಕಾರ್ಮಿಕರ ಪೈಕಿ ಓರ್ವ ನ ಮೃತದೇಹ ಮೂರನೇ ದಿನವಾದ ಬುಧವಾರ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗಣಿಯಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕನ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ದುಃಖಿತ ಕುಟುಂಬದ ಜೊತೆ ನಾವಿದ್ದೇವೆ, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಸ್ಥಳದಲ್ಲಿ ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಸೇರಿದಂತೆ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಗಣಿಯಲ್ಲಿ ಸಿಲುಕಿದ್ದ ಎಂಟು ಮಂದಿ ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ.
ಉಮ್ರಾಂಗ್ಸೊದಲ್ಲಿದ್ದ ಕಲ್ಲಿದ್ದಲು ಗಣಿಗೆ ಸೋಮವಾರ ಹಠಾತ್ ನೀರು ನುಗ್ಗಿದ ಪರಿಣಾಮ ಕಾರ್ಮಿಕರು ಸಿಲುಕಿಕೊಂಡಿದ್ದರು. ʼಮಂಗಳವಾರ ಸಂಜೆ ನಿಲ್ಲಿಸಲಾಗಿದ್ದ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ. ಗಣಿ ಸುರಂಗವು ಸುಮಾರು 150 ಅಡಿ ಆಳದಲ್ಲಿದೆ. ಇದರಲ್ಲಿ 100 ಅಡಿಗಳವರೆಗೆ ನೀರು ತುಂಬಿದೆ. ಮಂಗಳವಾರ ಬೆಳಿಗ್ಗಿನಿಂದ 30ರಿಂದ 35 ಅಡಿ ಆಳದವರೆಗೆ ಇಳಿಯಲು ಮಾತ್ರ ಸಾಧ್ಯವಾಯಿತು. ನೌಕಾ ಪಡೆಯ ಈಜು ತಜ್ಞರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಇಂದು ಗಣಿ ಸುರಂಗವನ್ನು ತಲುಪುವ ವಿಶ್ವಾಸವಿದೆʼ ಎಂದು ಎನ್ ಡಿ ಆರ್ ಎಫ್ ಹಿರಿಯ ಅಧಿಕಾರಿ ತಿವಾರಿ ಹೇಳಿದ್ದಾರೆ.