ಗೋವಾ ಅರ್ಚಕರು ಲೂಟಿಕೋರರು ಎಂದು ಉಲ್ಲೇಖಿಸಿದ ಲೇಖಕನ ವಿರುದ್ಧ ಎಫ್ಐಆರ್ ದಾಖಲು
ಮಡಗಾಂವ್: ಗೋವಾದ ಅರ್ಚಕರು ಲೂಟಿಕೋರರು ಎಂದು ಉಲ್ಲೇಖಿಸಿದ ಕೊಂಕಣಿ ಲೇಖಕ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ದತ್ತ ದಾಮೋದರ್ ನಾಯಕ್ ವಿರುದ್ಧ ಕಾಣಕೋಣ ಪೊಲೀಸರು ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.
ಗೋವಾದ ಧಾರ್ಮಿಕ ಹಾಗೂ ಸಾಹಿತ್ಯಕ ವಲಯದಲ್ಲಿ ಈ ಕ್ರಮ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವಾಲಯ, ಅರ್ಚಕರು ಮತ್ತು ಮಠಗಳಿಗೆ ಸಂಬಂಧಿಸಿದಂತೆ ನಾಯಕ್ ಅವರ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಣಕೋಣದ ನಿವಾಸಿ ಸತೀಶ್ ಭಟ್ ಎಂಬವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಮುಖ್ಯವಾಗಿ ಕಾಣಕೋಣದಲ್ಲಿರುವ ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರಮುಖ ಮಠವಾದ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆಯನ್ನು ಆಕ್ಷೇಪಿಸಲಾಗಿದೆ.
ತಮ್ಮನ್ನು ಕಟ್ಟಾ ನಾಸ್ತಿಕವಾದಿ ಎಂದು ಬಣ್ಣಿಸಿಕೊಂಡಿರುವ ನಾಯಕ್ (70) ತಮ್ಮ ಉಲ್ಲೇಖವನ್ನು ಸಮರ್ಥಿಸಿಕೊಂಡಿದ್ದು, ಇನ್ನೂ ಉತ್ತಮ ಪದ ಬಳಸಬಹುದಿತ್ತು ಎಂದು ಒಪ್ಪಿಕೊಂಡಿದ್ದಾರೆ. "ನಾನು ಲೂಟಿ ಎಂಬ ಶಬ್ದವನ್ನು ಬಳಸದೇ ಇರಬಹುದಿತ್ತು. ಹಣವನ್ನು ಸುಲಿಗೆ ಮಾಡಲಾಗುತ್ತದೆ ಎಂಬ ಅರ್ಥದಲ್ಲಿ ನಾನು ಹೇಳಿದ್ದೆ" ಎಂದು ಖ್ಯಾತ ಉದ್ಯಮಿಯೂ ಆಗಿರುವ ಅವರು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ಕಳೆದ ವಾರ ನೀಡಿದ ಸಂದರ್ಶನದಲ್ಲಿ, "ದೇವರು ಮತ್ತು ಧರ್ಮಕ್ಕೆ ನಾನು ಒಂದು ಪೈಸೆ ಕೂಡಾ ನೀಡುವುದಿಲ್ಲ. ದೇಗುಲಗಳು ಹಣ ಲೂಟಿ ಮಾಡುತ್ತಿವೆ. ಈ ಅರ್ಚಕರು, ಪರ್ತಗಾಳಿ ಮಠ, ಈ ದೇವಾಲಯಗಳು ನನ್ನನ್ನು ಲೂಟಿ ಮಾಡುವ ಸಾಧ್ಯತೆ ಇತ್ತು" ಎಂದು ಹೇಳಿದ್ದರು. ಇದು ಜಾಲತಾಣಗಳಲ್ಲಿ ವೈರಲ್ ಆಗಿತ್ತು.