ಸರಕಾರಕ್ಕೆ ತೊಂದರೆ ನೀಡಲು, ತಮಿಳರಿಗೆ ಅವಮಾನಿಸಲು ರಾಜ್ಯಪಾಲರನ್ನು ತಮಿಳುನಾಡಿಗೆ ಕಳಿಸಲಾಗಿದೆ: ಕನಿಮೋಳಿ ಆರೋಪ

Update: 2025-01-07 10:59 GMT

ಕನಿಮೋಳಿ | PTI 

ಚೆನ್ನೈ: ಡಿಎಂಕೆ ಸರಕಾರಕ್ಕೆ ತೊಂದರೆ ನೀಡಲು ಹಾಗೂ ತಮಿಳರಿಗೆ ಅವಮಾನಿಸಲೆಂದೇ ಕೇಂದ್ರ ಸರಕಾರವು ಆರ್.ಎನ್.ರವಿಯನ್ನು ತಮಿಳುನಾಡು ರಾಜ್ಯಪಾಲರನ್ನಾಗಿ ಕಳಿಸಿದೆ ಎಂದು ಮಂಗಳವಾರ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಆರೋಪಿಸಿದ್ದಾರೆ.

ರಾಜ್ಯಪಾಲರ ಹುದ್ದೆಯು ರಾಜಕಾರಣ ಮಾಡುವುದಕ್ಕಲ್ಲ ಎಂದ ಅವರು, ವಿಧಾನಸಭಾ ಅಧಿವೇಶವನ್ನುದ್ದೇಶಿಸಿ ಮಾತನಾಡಲು ಆಸಕ್ತಿ ಇಲ್ಲದಿದ್ದರೆ, ರಾಜ್ಯಪಾಲರು ರಜೆ ಪಡೆಯಲು ಸ್ವತಂತ್ರರಾಗಿದ್ದಾರೆ ಎಂದೂ ಹರಿಹಾಯ್ದರು.

“ಯಾಕೆ ರಾಜಕಾರಣ ಮಾಡುತ್ತಿದ್ದೀರಿ? ರಾಜ್ಯಪಾಲರು ರಾಜಕೀಯ ಮಾಡುವ ಅಗತ್ಯವಿಲ್ಲ. ಅವರು ರಜೆ ತೆಗೆದುಕೊಂಡು ವಿಧಾನಸಭಾ ಅಧಿವೇಶನದಿಂದ ದೂರ ಉಳಿಯಬಹುದು” ಎಂದು ಡಿಎಂಕೆ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ತೂತ್ತುಕುಡಿ ಸಂಸದರೂ ಆದ ಕನಿಮೋಳಿ ತಾಕೀತು ಮಾಡಿದರು.

ಈ ವರ್ಷದ ಚೊಚ್ಚಲ ಅಧಿವೇಶನದ ಆರಂಭದಲ್ಲಿ ರಾಜ್ಯ ಸರಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದಿರಲು ನಿರ್ಧರಿಸಿದ ರಾಜ್ಯಪಾಲ ರವಿಯವರ ನಡೆಯನ್ನು ಖಂಡಿಸಿ, ಜಿಲ್ಲಾ ಕೇಂದ್ರಗಳೂ ಸೇರಿದಂತೆ ರಾಜ್ಯಾದ್ಯಂತ ಆಡಳಿತಾರೂಢ ಡಿಎಂಕೆ ಪಕ್ಷ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News