ತಮಿಳುನಾಡು | ರಾಷ್ಟ್ರಗೀತೆ ನುಡಿಸಲಿಲ್ಲ ಎಂದು ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ರಾಜ್ಯಪಾಲ

Update: 2025-01-06 06:24 GMT

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ (PTI)

ಚೆನ್ನೈ: ವಿಧಾನಸಭೆಯಲ್ಲಿ ರಾಷ್ಟ್ರಗೀತೆ ನುಡಿಸಲಿಲ್ಲ ಎಂದು ಅಸಮಾಧಾನಗೊಂಡ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಸೋಮವಾರ ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣವನ್ನು ಮಾಡದೆ ಅಸೆಂಬ್ಲಿಯಿಂದ ನಿರ್ಗಮಿಸಿದ್ದಾರೆ.

ವಿಧಾನಸಭೆಯಲ್ಲಿ ತಮಿಳುನಾಡಿನ ನಾಡಗೀತೆ ತಮಿಳ್ ತಾಯ್ ವಜುತು ನುಡಿಸಲಾಗಿದೆ. ಆದರೆ ಆ ಬಳಿಕ ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ, ಆದರೆ ಅದು ನುಡಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.

ಈ ಕುರಿತು ತಮಿಳು ನಾಡಿನ ರಾಜಭವನ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ʼಇಂದು ತಮಿಳುನಾಡು ವಿಧಾನಸಭೆಯಲ್ಲಿ ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಮತ್ತೊಮ್ಮೆ ಅವಮಾನ ಮಾಡಲಾಗಿದೆ. ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯವಾಗಿದೆ. ರಾಜ್ಯಪಾಲರ ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಇದನ್ನು ಎಲ್ಲಾ ರಾಜ್ಯ ವಿಧಾನಸಭೆಗಳಲ್ಲಿ ನುಡಿಸಲಾಗುತ್ತದೆ. ಇಂದು ರಾಜ್ಯಪಾಲರು ಸದನಕ್ಕೆ ಆಗಮಿಸಿದಾಗ ಕೇವಲ ʼತಮಿಳು ತಾಯ್ ವಾಜತ್ತುʼ ಮಾತ್ರ ನುಡಿಸಲಾಗಿದೆ. ರಾಜ್ಯಪಾಲರು ಸದನದ ಸಾಂವಿಧಾನಿಕ ಕರ್ತವ್ಯವನ್ನು ಗೌರವಪೂರ್ವಕವಾಗಿ ನೆನಪಿಸಿ ರಾಷ್ಟ್ರಗೀತೆಯನ್ನು ನುಡಿಸಲು ಸದನದ ನಾಯಕರಾದ ಮುಖ್ಯಮಂತ್ರಿ ಮತ್ತು ಸಭಾಪತಿಯವರಿಗೆ ಮನಃಪೂರ್ವಕವಾಗಿ ಮನವಿ ಮಾಡಿದ್ದಾರೆ. ಆದರೆ, ಅವರು ಕಟುವಾಗಿ ನಿರಾಕರಿಸಿದ್ದಾರೆ. ಇದು ತೀವ್ರ ಕಳವಳಕಾರಿ ವಿಷಯವಾಗಿದೆʼ ಎಂದು ಹೇಳಿದೆ.

ರಾಜ್ಯಪಾಲರು ವಿಧಾನಸಭೆಯಲ್ಲಿ ಕೇವಲ ಮೂರು ನಿಮಿಷಗಳ ಕಾಲ ಹಾಜರಿದ್ದು ಸದನದಿಂದ ನಿರ್ಗಮಿಸಿದ್ದಾರೆ. ರಾಜ್ಯಪಾಲರ ಕ್ರಮ ಖಂಡಿಸಿ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News