ಆಸ್ಟ್ರೇಲಿಯಾ ಮಾದರಿಯಂತೆ ಮಕ್ಕಳಿಗೆ ಜಾಲತಾಣ ನಿಷೇಧ ಇಲ್ಲ: ಐಟಿ ಕಾರ್ಯದರ್ಶಿ ಸ್ಪಷ್ಟನೆ
ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿರುವಂತೆ ಮಕ್ಕಳಿಗೆ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣ ನಿಷೇಧಿಸುವ ಬದಲಾಗಿ ಪೋಷಕರಿಂದ ದೃಢೀಕೃತ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಪ್ರಸ್ತಾವಿಸಿದೆ ಎಂದು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎಸ್.ಕೃಷ್ಣನ್ ಹೇಳಿದ್ದಾರೆ.
ಈ ಸಂಬಂಧ ಕರಡು ಡಿಜಿಟಲ್ ವೈಯಕ್ತಿಕ ಡಾಟಾ ಸಂರಕ್ಷಣಾ ನಿಯಮಾವಳಿ ಸಿದ್ಧವಾಗಿದೆ ಎಂದು ವಿಶೇಷ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
"ಈ ಅಂಶಗಳನ್ನು ಪ್ರತಿಯೊಂದು ಸಮಾಜವೂ ತನ್ನದೇ ಆದ ರೀತಿಯಲ್ಲಿ ನಿರ್ಧರಿಸಬೇಕು. ಆದ್ದರಿಂದ ಜಾಲತಾಣ ಲಭ್ಯತೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕೇ ಎನ್ನುವುದು ಸಾಮಾಜಿಕ ಅಂಶ. ಭಾರತೀಯ ಪರಿಸ್ಥಿತಿಯಲ್ಲಿ, ಆನ್ಲೈನ್‌ನಲ್ಲಿ ಸಾಕಷ್ಟು ಕಲಿಕೆ ಕೂಡಾ ಆಗುತ್ತಿದೆ. ಆದ್ದರಿಂದ ನೀವು ಲಭ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಅದು ಒಳ್ಳೆಯ ಮಾರ್ಗವೇ? ಇದು ವಿಸ್ತೃತ ಸಾಮಾಜಿಕ ಚರ್ಚೆಯ ಅಂಶ" ಎಂದು ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣಗಳು ಕಾನೂನುಬಾಹಿರ ವಿಷಯಗಳನ್ನು ಕಿತ್ತುಹಾಕುತ್ತಿರುವ ಬಗ್ಗೆ ಪ್ರಶ್ನಿಸಿದಾಗ, "ವಾಸ್ತವವಾಗಿ ಬದ್ಧತೆಯ ಅಂಶ ಗಣನೀಯವಾಗಿ ಹೆಚ್ಚುತ್ತಿದೆ. ಹಲವು ಅಂಶಗಳನ್ನು ನಿಷೇಧಿಸುವ ಮುನ್ನವೇ ವ್ಯವಹರಿಸಲಾಗುತ್ತದೆ. ತಕ್ಷಣವೇ ಜಾಲತಾಣಗಳು ಇದನ್ನು ಮಾಡುತ್ತಿವೆ. ತಮ್ಮದೇ ಸಮುದಾಯ ಮಾರ್ಗದರ್ಶಿ ಮೂಲಕ ಅಥವಾ ಸರ್ಕಾರದ ಮನವಿಯ ಮೇರೆಗೆ ಕಾನೂನುಬಾಹಿರ ವಿಷಯಗಳನ್ನು, ತಕ್ಷಣವೇ ಕಿತ್ತುಹಾಕುವ ರೂಢಿ ಗಣನೀಯವಾಗಿ ಬೆಳೆಯುತ್ತಿದೆ" ಎಂದು ಉತ್ತರಿಸಿದರು.
ಸಂಪೂರ್ಣವಾಗಿ ನಿಷೇಧಿಸುವ ಸಾಧ್ಯತೆ ಇಲ್ಲವೇ ಎಂದು ಪ್ರಶ್ನಿಸಿದಾಗ, "ಇದುವರೆಗೆ ಯಾರೂ ಅಂಥ ಸಲಹೆಗಳನ್ನು ನೀಡಿಲ್ಲ. ನಿಷೇಧಕ್ಕೆ ಸಂಬಂಧಿಸಿದಂತೆ ಯಾವ ಚರ್ಚೆಯೂ ನಡೆದಿಲ್ಲ. ಮಕ್ಕಳಿಗೆ ಆಗಬಹುದಾದ ಹಾನಿಯನ್ನು ಹೇಗೆ ತಡೆಯಬಹುದು ಮತ್ತು ಇದನ್ನು ತಡೆಯಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆಗಳಿವೆ. ಆದರೆ ಸಂಪೂರ್ಣ ನಿಷೇಧದ ಮಟ್ಟಕ್ಕೆ ಅದು ಹೋಗಿಲ್ಲ" ಎಂದು ಸ್ಪಷ್ಟಪಡಿಸಿದರು.