4 ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದುಕೊಂಡಿದ್ದ ಯುವಕನ ಮೃತದೇಹ : 'ನಮ್ಮ ವ್ಯಾಪ್ತಿಗೆ ಬರುವುದಿಲ್ಲ' ಎಂದು ನುಣುಚಿಕೊಂಡ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಪೊಲೀಸರು!
ಹೊಸದಿಲ್ಲಿ: ʼಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲʼ ಎಂದು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಪೊಲೀಸರು ಜವಾಬ್ಧಾರಿಯಿಂದ ನುಣುಚಿಕೊಂಡ ಕಾರಣ ಅಪಘಾತದಲ್ಲಿ ಮೃತಪಟ್ಟ ಯುವಕನೋರ್ವನ ಮೃತದೇಹ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಬಿದ್ದುಕೊಂಡಿದ್ದು, ಪೊಲೀಸರ ನಡೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದಾರೆ.
ರಾಹುಲ್ ಅಹಿರ್ವಾರ್(27) ಎಂಬ ಯುವಕ ದಿಲ್ಲಿಯಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಅಪಘಾತದ ನಂತರ ಸ್ಥಳೀಯರು ಮಧ್ಯಪ್ರದೇಶದ ಹರ್ಪಾಲ್ ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಇದು ಉತ್ತರಪ್ರದೇಶದ ಮಹೋಬಾ ಜಿಲ್ಲೆಯ ಮಹೋಬ್ಕಾಂತ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಹೊರಟು ಹೋಗಿದ್ದಾರೆ.
ಈ ವೇಳೆ ಸ್ಥಳೀಯರು ಉತ್ತರಪ್ರದೇಶ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ, ಅವರು ಕೂಡ ಜವಾಬ್ಧಾರಿಯಿಂದ ನುಣುಚಿಕೊಂಡಿದ್ದು, ಇದು ಮಧ್ಯಪ್ರದೇಶ ಪೊಲೀಸರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಪೊಲೀಸರ ನಡೆಯನ್ನು ಖಂಡಿಸಿದ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಕೊನೆಗೆ ನಾಲ್ಕು ಗಂಟೆಗಳ ಬಳಿಕ ಮಧ್ಯಪ್ರದೇಶ ಪೊಲೀಸರು ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಘಟನಾ ಸ್ಥಳದಿಂದ ವೈರಲ್ ಆದ ವೀಡಿಯೊಗಳು ಸಂತ್ರಸ್ತನ ಕುಟುಂಬಸ್ಥರು ರಸ್ತೆಯಲ್ಲಿ ಮೃತದೇಹದ ಮುಂದೆ ಅಳುತ್ತಿರುವುದನ್ನು ತೋರಿಸಿದೆ. ಈ ಪ್ರದೇಶವು ಮಧ್ಯಪ್ರದೇಶದ ವ್ಯಾಪ್ತಿಗೆ ಬರುತ್ತದೆ, ಆದರೆ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ ದೇಹವು ಈಗ ರಸ್ತೆಯ ಮೇಲೆ ಬಿದ್ದುಕೊಂಡಿದೆ. ಮಧ್ಯಪ್ರದೇಶದ ಪೋಲೀಸ್ ಓರ್ವರು ನಮ್ಮನ್ನು ನಿಂದಿಸಿದರು ಮತ್ತು ಇದು ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಆದಷ್ಟು ಬೇಗ ಮಾಡಬೇಕು, ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆ ಹಚ್ಚಬೇಕೆಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.