ಬಿಜೆಪಿ ಅಧಿಕಾರಕ್ಕೆ ಬಂದರೆ, ಜನ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ : ಪ್ರಧಾನಿ ನರೇಂದ್ರ ಮೋದಿ
ಹೊಸದಿಲ್ಲಿ : ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ನರೇಂದ್ರ ಮೋದಿ ರವಿವಾರ ಭರವಸೆ ನೀಡಿದ್ದಾರೆ.
ಆದರೆ, ಆ ಯೋಜನೆಗಳ ಅನುಷ್ಠಾನದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತನ್ನ ಸರಕಾರ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು. ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯ ಸಂದರ್ಭ ನರೇಂದ್ರ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರವನ್ನು ಕಟುವಾಗಿ ಟೀಕಿಸಿದ ಅವರು, ಆಪ್ ಕೇಂದ್ರದೊಂದಿಗಿನ ಸಂಘರ್ಷದಲ್ಲಿ ಕಳೆದೊಂದು ದಶಕವನ್ನು ವ್ಯರ್ಥ ಮಾಡಿದೆ ಎಂದು ಆರೋಪಿಸಿದರು.
ದಿಲ್ಲಿಗೆ ಆಪ್ ನೇತೃತ್ವದ ಸರಕಾರ ವಿಪತ್ತು ಎಂದು ಹೇಳಿದ ಅವರು, ದಿಲ್ಲಿಯನ್ನು ‘ಭವಿಷ್ಯದ ನಗರ’ವಾಗಿ ಬದಲಾಯಿಸಲು ಬಿಜೆಪಿಗೆ ಒಂದು ಅವಕಾಶ ನೀಡುವಂತೆ ಅಲ್ಲಿನ ಜನರನ್ನು ಆಗ್ರಹಿಸಿದರು.
ಈ ವಿಪತ್ತು ಹೋದರೆ ಮಾತ್ರ ನಾವು ಅಭಿವೃದ್ಧಿಯ ಡಬಲ್ ಎಂಜಿನ್ ಅನ್ನು ತರುತ್ತೇವೆ ಎಂದು ಅವರು ಬಿಜೆಪಿ ಆಡಳಿತದ ಅಡಿಯಲ್ಲಿ ಕೇಂದ್ರ ಹಾಗೂ ದಿಲ್ಲಿ ಆಡಳಿತದ ನಡುವಿನ ಹೊಂದಾಣಿಕೆ ಉಲ್ಲೇಖಿಸಿ ಹೇಳಿದರು.
ಮೆಟ್ರೋ ಜಾಲ ವಿಸ್ತರಣೆ, ಹೆದ್ದಾರಿ ಅಭಿವೃದ್ಧಿ ಹಾಗೂ ನಮೋ ಭಾರತ್ ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಹಾಗೂ ದೊಡ್ಡ ಆಸ್ಪತ್ರೆಗಳಂತಹ ಉಪಕ್ರಮಗಳ ಆರಂಭ ಸೇರಿದಂತೆ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಪ್ರಗತಿಯ ಕುರಿತು ಅವರು ಗಮನ ಸೆಳೆದರು.
ಆದರೆ, ಹೊಂಡ ತುಂಬಿದ ರಸ್ತೆ, ಉಕ್ಕಿ ಹರಿಯುತ್ತಿರುವ ಒಳಚರಂಡಿಗಳು ಹಾಗೂ ಸಂಚಾರ ದಟ್ಟಣೆಯಿಂದ ಆಟೋ ಮತ್ತು ಕ್ಯಾಬ್ ಚಾಲಕರು ಕೆಲವು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸದೇ ಇರುವಂತಹ ವಿಷಯಗಳನ್ನು ಅವರು ಈ ಸುಧಾರಣೆಯೊಂದಿಗೆ ಹೋಲಿಕೆ ಮಾಡಿದರು.