ಮೀರತ್ | ಗಂಟಲು ಸೀಳಿದ ಗಾಳಿಪಟದ ದಾರ : ಯುವಕ ಮೃತ್ಯು
ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ಯುವಕನೋರ್ವ ಬೈಕ್ ನಲ್ಲಿ ತೆರಳುತ್ತಿದ್ದಾಗ ಗಾಜು (ಮಾಂಜಾ) ಲೇಪಿತ ಗಾಳಿಪಟದ ದಾರ ಕತ್ತು ಸೀಳಿದ್ದರಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತನನ್ನು ಸುಹೇಲ್(22) ಎಂದು ಗುರುತಿಸಲಾಗಿದೆ. ಸುಹೇಲ್ ಮತ್ತು ಆತನ ಸ್ನೇಹಿತ ನವಾಜಿಶ್ ಶಾಪಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ನವಾಜಿಶ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ಗ್ಲಾಸ್ ಲೇಪಿತ ಗಾಳಿಪಟದ ತಂತಿಗಳನ್ನು ಖರೀದಿಸಿದ್ದರು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚೈನೀಸ್ ಮಾಂಜಾ ಎಂದು ಕರೆಯಲ್ಪಡುವ ಗಾಜು ಅಥವಾ ನೈಲಾನ್ ಲೇಪಿತ ದಾರ ಮಾರಣಾಂತಿಕವಾಗಿದೆ. ಇವುಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.
ಘಟನೆಯ ನಂತರ, ಮೀರತ್ ಪೊಲೀಸರು ಚೈನೀಸ್ ಮಾಂಜಾವನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಐವರು ವ್ಯಾಪಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚೈನೀಸ್ ಮಾಂಜಾವನ್ನು ತುಂಬಿದ್ದ ಮೂರು ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.