ಶಾರೂಕ್ ಖಾನ್ ಗೌರಿ ಜತೆಗೆ ಹೊಸ ವರ್ಷ ಮಕ್ಕಾ ಯಾತ್ರೆ ಕೈಗೊಂಡಿದ್ದರೇ? ವಾಸ್ತವ ಇಲ್ಲಿದೆ...
ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ ಬಳಕೆ ಮತ್ತು ಡೀಪ್ ಫೇಕ್ ಪ್ರಸರಣ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಲಕ್ಷಾಂತರ ಮಂದಿ ಗಣ್ಯರು ಡೀಪ್ ಫೇಕ್ ಅಶ್ಲೀಲತೆಗೆ ಬಲಿಪಶುಗಳಾಗಿದ್ದಾರೆ ಎನ್ನುವುದನ್ನು ಬ್ರಿಟನ್ ಹಾಗೂ ಇತರ ದೇಶಗಳು ನಡೆಸಿದ ಅಧ್ಯಯನಗಳು ದೃಢಪಡಿಸಿವೆ.
ಎಐ ಬಳಸಿಕೊಂಡು ಸಿದ್ಧಪಡಿಸಿದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಅಮೀರ್ ಖಾನ್ ಅವರ ಕುರಿತ ವಿಡಿಯೊಗಳು ಕೂಡಾ ನಕಲಿ ಎನ್ನುವುದು ಭಾರತದಲ್ಲಿ ಕೂಡಾ ದೃಢಪಟ್ಟಿವೆ. ಇದೀಗ ಶಾರೂಕ್ ಖಾನ್ ತಮ್ಮ ಪತ್ನಿ ಗೌರಿ ಹಾಗೂ ಮಗ ಆರ್ಯನ್ ಜತೆಗೆ ಮಕ್ಕಾಗೆ ಭೇಟಿ ನೀಡಿದ್ದಾರೆ ಎನ್ನಲಾದ ಚಿತ್ರ ಇತ್ತೀಚಿನ ಡೀಪ್ ಫೇಕ್ ಪ್ರಕರಣವಾಗಿದೆ.
ಹೊಸ ವರ್ಷದ ಸಂದರ್ಭದಲ್ಲಿ ಈ ಚಿತ್ರಗಳು ಹರಿದಾಡಿದ್ದು, ಹೊಸ ವರ್ಷದ ಮೊದಲ ದಿನ ಎಸ್ಆರ್ ಕೆ ತಮ್ಮ ಕುಟುಂಬದ ಜತೆ ಮಕ್ಕಾಗೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ಮಕ್ಕಾದ ಭವ್ಯ ಮಸೀದಿಯ ಎದುರು ಎಸ್ಆರ್ ಕೆ, ಗೌರಿ ಮತ್ತು ಆರ್ಯನ್ ನಿಂತಂತೆ ಚಿತ್ರದಲ್ಲಿ ಭಾಸವಾಗುತ್ತಿತ್ತು.
ಈ ಚಿತ್ರ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಅದು ನಕಲಿ ಹಾಗೂ ಎಐ ಬಳಸಿಕೊಂಡು ಸೃಷ್ಟಿಸಿದ ಚಿತ್ರ ಎನ್ನುವುದು ದೃಢಪಟ್ಟಿದೆ. ಕೆಲ ಇನ್ಸ್ಟ್ರಾಗ್ರಾಂ ಹ್ಯಾಂಡಲ್ ಗಳು ಈ ಚಿತ್ರ ಎಐ ಬಳಸಿಕೊಂಡು ಸೃಷ್ಟಿಸಿದ ಚಿತ್ರ ಎನ್ನುವುದನ್ನು ಸ್ಪಷ್ಟವಾಗಿ ಹೇಳಿವೆ.
ಶಾರೂಕ್ ಖಾನ್ ಹಾಗೂ ಗೌರಿ 1991ರ ಅಕ್ಟೋಬರ್ 25ರಂದು ವಿವಾಹವಾಗಿದ್ದರು. 2005ರಲ್ಲಿ ಕರಣ್ ಜೋಹರ್ ಅವರ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಗೌರಿ ಖಾನ್, ಕುಟುಂಬದಲ್ಲಿ ಪರಸ್ಪರ ಗೌರವ ಮತ್ತು ಸಾಮರಸ್ಯ ಇರುವ ಬಗ್ಗೆ ಮಾತನಾಡಿದ್ದರು. "ಶಾರೂಕ್ ಖಾನ್ ಅವರ ಧರ್ಮವನ್ನು ನಾನು ಗೌರವಿಸುತ್ತೇನೆ. ಹಾಗೆಂದು ನಾನು ಮತಾಂತರಗೊಂಡು ಮುಸ್ಲಿಂ ಆಗುತ್ತೇನೆ ಎಂಬ ಅರ್ಥವಲ್ಲ. ಅದರಲ್ಲಿ ನನಗೆ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ಅವರದ್ದೇ ಧರ್ಮವನ್ನು ಅನುಸರಿಸುತ್ತಾರೆ. ಪರಸ್ಪರ ಗೌರವ ಇರಬೇಕು. ಶಾರೂಕ್ ಖಾನ್ ಎಂದೂ ನನ್ನ ಧರ್ಮವನ್ನು ಅಗೌರವದಿಂದ ಕಂಡಿಲ್ಲ. ನಾನು ಅವರ ಧರ್ಮವನ್ನು ಅಗೌರವಿಂದ ಕಾಣುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.