ಪ್ರಿಯಾಂಕಾ ಗಾಂಧಿ, ಆತಿಶಿ ಕುರಿತ ರಮೇಶ್ ಬಿಧುರಿ ಹೇಳಿಕೆಗೆ ಬಿಜೆಪಿ ಅಸಮ್ಮತಿ
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ದಿಲ್ಲಿ ಮುಖ್ಯಮಂತ್ರಿ ಆತಿಶಿ ಅವರ ಬಗ್ಗೆ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಸೋಮವಾರ ಅಸಮ್ಮತಿ ವ್ಯಕ್ತಪಡಿಸಿದ್ದು, ʼಲಿಂಗ ಅಥವಾ ಕುಟುಂಬ ಸಂಬಂಧಿತ ಹೇಳಿಕೆಗಳಿಂದ ರಾಜಕಾರಣಿಗಳು ದೂರವಿರಬೇಕು ಎಂದು ಹೇಳಿದೆ.
ಕಲ್ಕಾಜಿಯಲ್ಲಿ ಪ್ರಿಯಾಂಕಾ ಗಾಂಧಿಯ ಕೆನ್ನೆಯಂತಿರುವ ರಸ್ತೆಗಳನ್ನು ನಿರ್ಮಿಸುವುದಾಗಿ ಬಿಧುರಿ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ಪ್ರಿಯಾಂಕಾ ಗಾಂಧಿ ವಿರುದ್ಧದ ಬಿಧುರಿ ಅವರ ಹೇಳಿಕೆಯು ಬಿಜೆಪಿಯ ಮಹಿಳಾ ವಿರೋಧಿ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಇದಲ್ಲದೆ ಆತಿಶಿ ತನ್ನ ಉಪನಾಮ "ಮರ್ಲೆನಾ" ಅನ್ನು "ಸಿಂಗ್" ಎಂದು ಬದಲಿಸಿ ಅವರು "ತನ್ನ ತಂದೆಯನ್ನು ಬದಲಾಯಿಸಿದ್ದಾರೆ" ಎಂದು ಬಿಧುರಿ ಹೇಳಿದ್ದರು. ಈ ಬಗ್ಗೆ ಬಿಜೆಪಿ ಮತ್ತು ಬಿಧುರಿ ವಿರುದ್ಧ ಎಎಪಿ ವಾಗ್ಧಾಳಿಯನ್ನು ನಡೆಸಿತ್ತು.
ದಿಲ್ಲಿಯ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ ಈ ಕುರಿತು ಪ್ರತಿಕ್ರಿಯಿಸಿದ್ದು, ರಾಜಕೀಯ ನಾಯಕರು ಇತರರ ವಿರುದ್ಧ ವೈಯಕ್ತಿಕವಾಗಿ ಲಿಂಗ ಅಥವಾ ಕುಟುಂಬಕ್ಕೆ ಸಂಬಂಧಿತ ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯಾಗಿ ಅಥವಾ ಹಿರಿಯನಾಗಿ, ನಾವೆಲ್ಲರೂ ಆತಿಶಿ ಮರ್ಲೆನಾ ಅವರ ತಂದೆಯನ್ನು ಗೌರವಿಸುತ್ತೇವೆ ಆದರೆ ಮರ್ಲೆನಾ ಮುಖ್ಯಮಂತ್ರಿಯಾಗಿರುವುದರಿಂದ, ಅಫ್ಜಲ್ ಗುರುವನ್ನು ಬೆಂಬಲಿಸಿದ ಅವರ ತಂದೆಯ ನಡೆಯನ್ನು ಖಂಡಿಸುವಂತೆ ಅಥವಾ ಸಮರ್ಥಿಸುವಂತೆ ದಿಲ್ಲಿಯ ಜನರು ಬಯಸುತ್ತಾರೆ ಎಂದು ಕಪೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.