ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

Update: 2025-01-06 16:57 GMT

ಎಚ್.ಡಿ.ಕುಮಾರಸ್ವಾಮಿ | PC : X \ @PibSteel

ಹೊಸದಿಲ್ಲಿ: 2030ರ ವೇಳೆಗೆ ಭಾರತ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಬಗ್ಗೆ ಪ್ರಧಾನಿ ಮೋದಿ ನಿಗದಿ ಮಾಡಿರುವ ಗುರಿ ಮುಟ್ಟುವ ದೃಷ್ಟಿಯಿಂದ ಮತ್ತೊಂದು ಸುತ್ತಿನ ಉತ್ಪಾದನೆ ಆಧಾರಿತ ಉತ್ತೇಜನ ಸೌಲಭ್ಯ ಯೋಜನೆಗೆ ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಸೋಮವಾರ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸೌಲಭ್ಯಕ್ಕೆ ಉಕ್ಕು ಉತ್ಪಾದಕರು ನೋಂದಾಯಿಸಿಕೊಳ್ಳುವ ಪೋರ್ಟಲ್‍ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಉಕ್ಕು ಆಮದು ಪ್ರಮಾಣಕ್ಕೆ ಅಂಕೆ ಹಾಕುವ, ದೇಶೀಯವಾಗಿ ಹೆಚ್ಚು ಪ್ರಮಾಣದಲ್ಲಿ ಉಕ್ಕು ಉತ್ಪಾದಿಸುವ ಗುರಿಯೊಂದಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತೀಯ ಉಕ್ಕು ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು ಆಗಿದ್ದು, ದೇಶೀಯ ಉದ್ಯಮಕ್ಕೆ ಶಕ್ತಿ ತುಂಬುವುದೇ ಉದ್ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಉಕ್ಕು ಉದ್ಯಮ ಸ್ಥಿರವಾಗಿ ನಿಲ್ಲುವ ದಿಸೆಯಲ್ಲಿ ಈ ಸೌಲಭ್ಯ ಹೆಚ್ಚು ಪರಿಣಾಮಕಾರಿ. ಪಿಎಲ್‍ಐ 1.1 ಪೋರ್ಟಲ್ ಈಗಿನಿಂದಲೇ ನೋಂದಣಿಗೆ ತೆರೆದುಕೊಂಡಿದೆ. ಈ ತಿಂಗಳ ಕೊನೆ, ಎಂದರೆ ಜನವರಿ 31ರ ವರೆಗೂ ಉಕ್ಕು ಉದ್ಯಮಿಗಳು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಉಕ್ಕು ಉದ್ಯಾನದಲ್ಲಿ ಈ ಸೌಲಭ್ಯ ಪರಿವರ್ತನಾತ್ಮಕ ಹೆಜ್ಜೆ. ಉಕ್ಕು ಭಾರತದ ಪ್ರಗತಿಯ ಬೆನ್ನೆಲುಬಾಗಿದ್ದು, ಅದನ್ನು ಬಲಪಡಿಸುವ ಹಾಗೂ ಭವಿಷ್ಯದಲ್ಲಿ ಸುಸ್ಥಿರ ಅಭಿವೃದ್ಧಿಗೆ ಖಾತರಿ ನೀಡುವ ಬದ್ಧತೆಯನ್ನು ಹೊಂದಿದೆ. PಐI ಯೋಜನೆಯ ಮೊದಲ ಹಂತದಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. 27,106 ಕೋಟಿ ರೂ.ಹೂಡಿಕೆಯ ಜತೆಗೆ 14,760 ನೇರ ಉದ್ಯೋಗ ಅವಕಾಶ ಹಾಗೂ 7.90 ದಶಲಕ್ಷ ಟನ್‍ಗಳಷ್ಟು ಹೆಚ್ಚುವರಿ ವಿಶೇಷ ಉಕ್ಕಿನ ಉತ್ಪಾದನಾ ಸಾಮಥ್ರ್ಯವನ್ನು ತೋರಿಸಿದೆ.

ಕಳೆದ 2024ರ ಅಕ್ಟೋಬರ್ ಹೊತ್ತಿಗೆ 17,581 ಕೋಟಿ ರೂ.ಗಳಷ್ಟು ಹೂಡಿಕೆ ಆಗಿದೆ. ಪರಿಣಾಮವಾಗಿ 8,660 ಉದ್ಯೋಗಗಳು ಸೃಷ್ಟಿಯಾಗಿವೆ. ನಿಜಕ್ಕೂ ಪಿಎಲ್‍ಐ 1.0 ಯಶಸ್ಸು ಸ್ಫೂರ್ತಿದಾಯಕವಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಉಕ್ಕು ಉದ್ಯಮವನ್ನು ಮುನ್ನಡೆಸುವ ನಮ್ಮ ಸಂಕಲ್ಪಕ್ಕೆ ದೊಡ್ಡ ಶಕ್ತಿ ತುಂಬಿದೆ ಎಂದು ಅವರು ಹೇಳಿದರು.

ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿರುವ ಭಾರತವು 2022ರಿಂದ ದೇಶೀಯ ಉಕ್ಕಿನ ಬಳಕೆಯಲ್ಲಿ ಶೇ.12ಕ್ಕಿಂತ ಹೆಚ್ಚು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ, ಇದು ಬಲವಾದ ಆರ್ಥಿಕ ಮೂಲಭೂತ ಮತ್ತು ಮೂಲಸೌಕರ್ಯ ಮೇಲಿನ ಹೂಡಿಕೆಗಳಿಂದ ಸಾಧ್ಯವಾಗಿದೆ. 2030ರ ವೇಳೆಗೆ ವಾರ್ಷಿಕವಾಗಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆಯನ್ನು ಸಾಧಿಸುವ ಗುರಿ ಭಾರತದ್ದಾಗಿದೆ. ಪ್ರಧಾನಿ ಮೋದಿಯವರ ಗುರಿಯನ್ನು ನಾವು ಯಶಸ್ವಿಯಾಗಿ ಮುಟ್ಟುತ್ತೇವೆ. ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಉಕ್ಕಿನ ಬೆಳವಣಿಗೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News