ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣ: ಗಾಯಗೊಂಡ ಬಾಲಕನನ್ನು ಭೇಟಿ ಮಾಡಿದ ಅಲ್ಲು ಅರ್ಜುನ್
ಹೈದರಾಬಾದ್: ಇತ್ತೀಚಿನ ಯಶಸ್ವಿ ಚಲನಚಿತ್ರ ಪುಷ್ಪ-2 ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ಮಂಗಳವಾರ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು.
ಇದಕ್ಕೂ ಮುನ್ನ, ಜನವರಿ 5ರಂದು ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡುವ ಯೋಜನೆ ಹೊಂದಿದ್ದರಾದರೂ, ನಂತರ ಅದು ರದ್ದುಗೊಂಡಿತ್ತು.
ಡಿಸೆಂಬರ್ 4ರಂದು ಸಂಧ್ಯಾ ಚಿತ್ರಮಂದಿರದ ಬಳಿ ನಡೆದ ಕಾಲ್ತುಳಿತ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟು, 8 ವರ್ಷದ ಬಾಲಕನೊಬ್ಬ ಗಾಯಗೊಂಡಿರುವ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯನ್ನಾಗಿಸಲಾಗಿದೆ.
ಮಂಗಳವಾರ ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಕೂಡಾ ಉಪಸ್ಥಿತರಿದ್ದರು. ಅಲ್ಲು ಅರ್ಜುನ್ ಭೇಟಿ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿಯ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಅಲ್ಲು ಅರ್ಜುನ್ ಅವರ ಪ್ರಸ್ತಾವಿತ ಆಸ್ಪತ್ರೆ ಭೇಟಿ ಸಂಬಂಧ ರಾಮ್ ಗೋಪಾಲ್ ಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ನಿಮ್ಮ ಆಸ್ಪತ್ರೆ ಭೇಟಿ ವಿಷಯವನ್ನು ಗೋಪ್ಯವಾಗಿರಿಸಿ. ಹಾಗೆ ಮಾಡುವುದರಿಂದ ಆಸ್ಪತ್ರೆ ಸುತ್ತಮುತ್ತಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗಲಿದೆ ಎಂದು ಅವರು ಅಲ್ಲು ಅರ್ಜುನ್ ಗೆ ಸಲಹೆ ನೀಡಿದ್ದರು.
ಅಲ್ಲದೆ, ಅಲ್ಲು ಅರ್ಜುನ್ ಆಸ್ಪತ್ರೆ ಭೇಟಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಪೊಲೀಸರು ಮಾಡಲಿದ್ದಾರೆ ಎಂದೂ ಅವರು ಭರವಸೆ ನೀಡಿದ್ದರು.