ಭೋಪಾಲ್ ದುರಂತದ ತ್ಯಾಜ್ಯ ವಿಲೇವಾರಿಗೆ 6 ವಾರಗಳ ಗಡುವು

Update: 2025-01-07 02:25 GMT

PC: x.com/SiddharthKG7

ಭೋಪಾಲ್: ಸುರಕ್ಷಿತ ಶಿಷ್ಟಾಚಾರದಡಿ ಯೂನಿಯನ್ ಕಾರ್ಬೈಡ್ ತ್ಯಾಜ್ಯಗಳನ್ನು ಆರು ವಾರಗಳ ಒಳಗಾಗಿ ವಿಲೇವಾರಿ ಮಾಡುವಂತೆ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ. ಜತೆಗೆ ಈ ಬಗ್ಗೆ ತಪ್ಪು ಮಾಹಿತಿಗಳನ್ನು ಮಾಧ್ಯಮಗಳು ನೀಡಬಾರದು ಎಂದು ತಾಕೀತು ಮಾಡಿದೆ.

ಪಿತಾಂಪುರ ಕೈಗಾರಿಕಾ ಉಪನಗರದ ಪ್ಲಾಂಟ್ ಒಂದರಲ್ಲಿ ಕಾರ್ಬೈಡ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಸ್ಥಳೀಯ ನಾಗರಿಕರ ವಿರೋಧವಿದೆ; ಆದ್ದರಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಸಾಯನಿಕ ತ್ಯಾಜ್ಯಗಳನ್ನು ಹಾನಿಮುಕ್ತವಾಗಿ ವಿಲೇವಾರಿ ಮಾಡಬಹುದು ಎಂದು ಅವರಿಗೆ ಮನವರಿಕೆ ಮಾಡಲು ಆರು ತಿಂಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ಅನುಸರಣಾ ವರದಿಯಲ್ಲಿ ಕೋರಿತ್ತು.

ಒಟ್ಟು 12 ಮುಚ್ಚಿದ ಕಂಟೈನರ್ ಗಳಲ್ಲಿ ಒಯ್ದ 337 ಮೆಟ್ರಿಕ್ ಟನ್ ತ್ಯಾಜ್ಯವನ್ನು ಅನ್ಲೋಡ್ ಮಾಡಲು ಮೂರು ದಿನಗಳ ಕಾಲಾವಕಾಶ ಕೋರಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಖೇತ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಬಗ್ಗೆ ಕ್ರಮ ಕೈಗೊಳ್ಳುವುದು ಮತ್ತು ಸುರಕ್ಷಿತವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದನ್ನು ಖಾತರಿಪಡಿಸುವುದು ರಾಜ್ಯ ಸರ್ಕಾರದ ಹೊಣೆ ಎಂದು ಸ್ಪಷ್ಟಪಡಿಸಿದೆ.

ಕಾರ್ಬೈಡ್ ತ್ಯಾಜ್ಯವನ್ನು ಪಿತಾಂಪುರದಲ್ಲಿ ವಿಲೇವಾರಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿರುವ ಮಹಾತ್ಮಗಾಂಧಿ ವೈದ್ಯಕೀಯ ಕಾಲೇಜಿನ ಹಳೆವಿದ್ಯಾರ್ಥಿಗಳ ಸಂಘ ಮತ್ತು ಇತರ ಗುಂಪುಗಳು ಮುಂದಿಟ್ಟಿರುವ ಅಂಶಗಳನ್ನು ಪರಿಗಣಿಸುವಂತೆಯೂ ಹೈಕೋರ್ಟ್ ಸಲಹೆ ಮಾಡಿದೆ.

2015ರಲ್ಲಿ ನಡೆಸಿದ ಕಾರ್ಬೈಡ್ ತ್ಯಾಜ್ಯ ದಹನದ ಪರೀಕ್ಷಾರ್ಥ ಪ್ರಯೋಗದ ಆಧಾರದಲ್ಲಿ ಎಂಟು ವರ್ಷಗಳ ಬಳಿಕ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದೀಗ ಪಿತಾಂಪುರಕ್ಕೆ ತ್ಯಾಜ್ಯ ಸಾಗಾಣಿಕೆ ಮಾಡಲು ಯಾವುದೇ ಪರೀಕ್ಷೆ ನಡೆದಿಲ್ಲ. ಸಾರ್ವಜನಿಕ ಸಂದೇಹಗಳ ಹಿನ್ನೆಲೆಯಲ್ಲಿ ಮತ್ತೆ ಪರೀಕ್ಷಾರ್ಥ ಪ್ರಯೋಗ ನಡೆಸಬೇಕು ಎನ್ನುವುದು ಅವರ ಆಗ್ರಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News