ಮಹಾರಾಷ್ಟ್ರ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ: ಜಾರಂಗೆ ವಿರುದ್ಧ ಪ್ರಕರಣ

Update: 2025-01-06 16:47 GMT

ಮನೋಜ ಜಾರಂ | PC : PTI 

ಮುಂಬೈ : ಬೀಡ್ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಸರಪಂಚನ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವ ಧನಂಜಯ ಮುಂಧೆ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ ಜಾರಂಗೆ ಪಾಟೀಲ್ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಜಾರಂಗೆ ವಿಭಜನಕಾರಿ ಹೇಳಿಕೆಯನ್ನು ನೀಡಿದ್ದಾರೆ ಮತ್ತು ಸಾಮಾಜಿಕ ವೈಷಮ್ಯವನ್ನು ಸೃಷ್ಟಿಸಿದ್ದಾರೆ ಎಂದು ವ್ಯಕ್ತಿಯೋರ್ವರು ಬೀಡ್ ಜಿಲ್ಲೆಯ ಪರ್ಲಿ ಪೋಲಿಸರಿಗೆ ದೂರು ಸಲ್ಲಿಸಿದ್ದರು.

ಶನಿವಾರ ಪರ್ಭಾನಿಯಲ್ಲಿ ನಡೆದ ರ್ಯಾಲಿಯಲ್ಲಿ ಸರಪಂಚ ಸಂತೋಷ ದೇಶಮುಖ ಕೊಲೆ ಕುರಿತು ಮುಂಧೆಯವರನ್ನು ಟೀಕಿಸಿದ್ದ ಜಾರಂಗೆ,ದೇಶಮುಖ ಕುಟುಂಬಕ್ಕೆ ಏನಾದರೂ ಹಾನಿ ಸಂಭವಿಸಿದರೆ ಮರಾಠಾ ಸಮುದಾಯವು ಮುಂಧೆಯವರನ್ನು ಮುಕ್ತವಾಗಿ ತಿರುಗಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಅಜಿತ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಮುಂಧೆ ಪರ್ಲಿ ಶಾಸಕರಾಗಿದ್ದಾರೆ.

ಜಾರಂಗೆ ಹೇಳಿಕೆಯಿಂದ ಕೆರಳಿದ್ದ ಮುಂಧೆ ಬೆಂಬಲಿಗರು ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬೀಡ್‌ನ ಶಿವಾಜಿನಗರ ಪೋಲಿಸ್ ಠಾಣೆಯೆದುರು ಪ್ರತಿಭಟನೆ ನಡೆಸಿದ್ದರು.

ಬೀಡ್ ಜಿಲ್ಲೆಯ ವಿಂಡ್‌ಮಿಲ್ ಕಂಪನಿಯೊಂದರಿಂದ ಎರಡು ಕೋ.ರೂ. ಹಫ್ತಾವಸೂಲಿಗೆ ಕೆಲವು ವ್ಯಕ್ತಿಗಳ ಪ್ರಯತ್ನಗಳನ್ನು ವಿರೋಧಿಸಿದ್ದ ಮಸಾಜೋಗ್ ಗ್ರಾಮದ ಸರಪಂಚ ದೇಶಮುಖ ಅವರನ್ನು ಡಿ.9ರಂದು ಅಪಹರಿಸಿ ಹತ್ಯೆ ಮಾಡಲಾಗಿತ್ತು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಧೆ ಸಹಚರ ವಾಲ್ಮೀಕ ಕರಾಡ ಸೇರಿದಂತೆ ಏಳು ಜನರನ್ನು ಪೋಲಿಸರು ಬಂಧಿಸಿದ್ದಾರೆ.

ದೇಶಮುಖ ಮರಾಠಾ ಮತ್ತು ಆರೋಪಿಗಳ ಪೈಕಿ ಹೆಚ್ಚಿನವರು ಬೀಡ್ ಪ್ರದೇಶದ ಪ್ರಬಲ ವಂಜಾರಿ ಸಮುದಾಯಕ್ಕೆ ಸೇರಿರುವುದರಿಂದ ಪರಿಸ್ಥಿತಿಯು ಜಾತಿ ಸಂಘರ್ಷದ ಸ್ವರೂಪವನ್ನು ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News