ಇಸ್ರೋದ ಸರ್ವ ಬಾಲಕಿಯರ ಮೂನ್ ಮಿಷನ್ ಮುಂದಿನ ವರ್ಷ ಉಡಾವಣೆ
ಹೊಸದಿಲ್ಲಿ: ವಿಶ್ವದ 108 ದೇಶಗಳ 1200ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ಬಾಲಕಿಯರನ್ನು ಒಳಗೊಂಡ ಇಸ್ರೋದ ಸರ್ವ ಬಾಲಕಿಯರ ಮೂನ್ ಮಿಷನ್ ಶಕ್ತಿಸ್ಯಾಟ್ ಅನ್ನು ಮುಂದಿನ ವರ್ಷದ ಉಡಾಯಿಸಲು ಉದ್ದೇಶಿಸಲಾಗಿದೆ. 2026ರ ಸೆಪ್ಟೆಂಬರ್ ನಲ್ಲಿ ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಈ ಮಿಷನ್ ಉಡಾಯಿಸಲಿದೆ. ಈ ಮಿಷನ್ ಅಭಿವೃದ್ಧಿಯಲ್ಲಿ ಬೋಟ್ಸ್ವಾನಾ, ಗ್ರೀಸ್, ಕೋಸ್ಟರಿಕ, ಯುಎಇ ಹಾಗೂ ಕ್ಯಾಮರೂನ್ ಸೇರಿದಂತೆ ಹಲವು ದೇಶಗಳ ಬಾಲಕಿಯರು ಇದ್ದಾರೆ.
"ಚಂದ್ರಯಾನ ಮಿಷನ್ ಅಧಿಕೃತವಾಗಿ ಜನವರಿ 16 ಅಥವಾ 22ರಂದು ಘೋಷಣೆಯಾಗಲಿದೆ" ಎಂದು ಶಕ್ತಿಸ್ಯಾಟ್ ನಿರ್ದೇಶಕಿ ಶ್ರೀಮತಿ ಕೇಸನ್ ಹೇಳಿದ್ದಾರೆ. ಮಹಿಳೆಯರು ಬಾಹ್ಯಾಕಾಶ ವಲಯದ ಉದ್ಯೋಗದಲ್ಲಿ ಕೇವಲ ಶೇಕಡ 20ರಷ್ಟು ಪಾಲು ಹೊಂದಿದ್ದಾರೆ. ಮಹಿಳೆಯರನ್ನು ತೊಡಗಿಸಿಕೊಳ್ಳುವ ಮೂಲಕ ಈ ಅಂತರವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಬಳಕೆ ಮಾಡಿಕೊಳ್ಳದ ಪ್ರತಿಭೆಗಳನ್ನು ವಿಶ್ವಕ್ಕೆ ಅನಾವರಣಗೊಳಿಸುವ ಯೋಜನೆ ಇದಾಗಿದೆ" ಎಂದು ಅವರು ಬಣ್ಣಿಸಿದ್ದಾರೆ.
ಕಳೆದ ತಿಂಗಳು ಚೆನ್ನೈ ಮೂಲದ ಸ್ಪೇಸ್ ಕಿಡ್ಸ್ ಇಂಡಿಯಾ (ಎಸ್ಕೆಐ) ಮತ್ತು ಇನ್-ಸ್ಪೇಸ್ಇ ಶಕ್ತಿಸ್ಯಾಟ್ ಯೋಜನೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದವು. ಭಾರತ ಸರ್ಕಾರ ರಚಿಸಿರುವ ಇನ್-ಸ್ಪೇಸ್ಇ ಸಂಸ್ಥೆಯ ಮುಖ್ಯ ಪಾತ್ರವೆಂದರೆ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ವಲಯದ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುವುದು. 2017ರಲ್ಲಿ ವಿಶ್ವದ ಅತ್ಯಂತ ಪುಟ್ಟ ಕಲಮ್ ಸ್ಯಾಟ್ ಉಡಾಯಿಸುವ ಮೂಲಕ ಮತ್ತು ನಾಸಾ ಸ್ಪರ್ಧೆಯಲ್ಲಿ ಜಯ ಸಾಧಿಸುವ ಮೂಲಕ ಎಸ್ ಕೆಐ ಸುದ್ದಿ ಮಾಡಿತ್ತು.
12000 ಪ್ರತಿಭಾವಂತ ಬಾಲಕಿಯರ ಪೈಕಿ ಅವರ ಸಾಧನೆಯ ಆಧಾರದಲ್ಲಿ ಪ್ರತಿ ದೇಶದಿಂದ ಒಬ್ಬರಂತೆ 108 ಮಂದಿ ಬಾಲಕಿಯರನ್ನು ಆಯ್ಕೆ ಮಾಡಿ ಅಕ್ಟೋಬರ್ ಮತ್ತು ಡಿಸೆಂಬರ್ ನಲ್ಲಿ ಚೆನ್ನೈಗೆ ಕರೆತಂದು ಶಕ್ತಿಸ್ಯಾಟ್ ಮಿಷನ್ ಪರಿಚಯಿಸಲಾಗಿದೆ. ಇವರು ಭಿನ್ನ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಪೇಲೋಡ್ ಗಳನ್ನು ಅಭಿವೃದ್ಧಿಪಡಿಸಲಿದ್ದು, ಶಕ್ತಿಸ್ಯಾಟ್ ಇದನ್ನು ಚಂದ್ರನ ಕಕ್ಷೆಗೆ ಒಯ್ಯಲಿದೆ.
ಅಪೂರ್ವ ಬದ್ಧತೆಯೊಂದಿಗೆ ಈ ಮಿಷನ್ 108 ದೇಶಗಳ 108 ಬಾಲಕಿಯರಿಗೆ, ಚಂದ್ರನ ಕಕ್ಷೆಗೆ ಉಪಗ್ರಹವನ್ನು ಅಭಿವೃದ್ಧಿಪಡಿಸುವ, ನಿರ್ಮಿಸುವ ಮತ್ತು ಉಡಾಯಿಸುವ ಸುವರ್ಣಾವಕಾಶವನ್ನು ಒದಗಿಸಲಿದೆ. ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ 14 ರಿಂದ 18 ವರ್ಷ ವಯಸ್ಸಿನ ಹಾಗೂ ಇತರ ದೇಶಗಶಳ 14-16 ವಯಸ್ಸಿನ ಬಾಲಕಿಯರು ಇದರಲ್ಲಿ ಅವಕಾಶ ಪಡೆದಿದ್ದಾರೆ ಎಂದು ಕೇಸನ್ ವಿವರಿಸಿದ್ದಾರೆ.