ಒಡಿಶಾ | ಕಾರಿಗೆ ಕಸ ವಿಲೇವಾರಿ ವಾಹನ ಢಿಕ್ಕಿ : ಇಬ್ಬರು ಬಿಜೆಪಿ ನಾಯಕರು ಮೃತ್ಯು
ಭುವನೇಶ್ವರ: ಒಡಿಶಾದ ಸಂಬಲ್ ಪುರ ಜಿಲ್ಲೆಯಲ್ಲಿ ಕಾರಿಗೆ ಕಸ ವಿಲೇವಾರಿ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಬಿಜೆಪಿ ನಾಯಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷ ದೇಬೇಂದ್ರ ನಾಯಕ್ ಮತ್ತು ಮಾಜಿ ಸರಪಂಚ್ ಮುರಳೀಧರ ಚುರಿಯಾ ಎಂದು ಗುರುತಿಸಲಾಗಿದೆ.
ಬುರ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಮುಂಜಾನೆ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಆರು ಜನರಿದ್ದರು. ಎಲ್ಲರೂ ಭುವನೇಶ್ವರದಿಂದ ಕಾರ್ಡೋಲಾದಲ್ಲಿ ಮನೆಗೆ ಮರಳುತ್ತಿದ್ದರು. ಆರು ಮಂದಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಸುರೇಶ್ ಚಂದಾ ಘಟನೆಯ ಬಗ್ಗೆ ವಿವರಿಸಿದ್ದು, ಕಸ ವಿಲೇವಾರಿ ವಾಹನವು ನಮ್ಮ ಕಾರಿಗೆ ಎರಡು ಬಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಯಾರೋ ಉದ್ದೇಶಪೂರ್ವಕವಾಗಿ ಕೃತ್ಯವನ್ನು ಎಸಗುತ್ತಿದ್ದಾರೆ ಎಂದು ಶಂಕಿಸಿ ನಮ್ಮ ಕಾರಿನ ಚಾಲಕ ಕಾಂತಪಲ್ಲಿ ಚೌಕದ ಬಳಿ ಹೆದ್ದಾರಿಯಿಂದ ಗ್ರಾಮಾಂತರ ರಸ್ತೆಯ ಕಡೆಗೆ ಕಾರನ್ನು ತಿರುಗಿಸಿದ್ದಾನೆ. ಈ ವೇಳೆ ಕಾರಿಗೆ ಮತ್ತೆ ಡಂಪರ್ ವಾಹನ ಢಿಕ್ಕಿ ಹೊಡೆದಿದೆ. ಇದು ಉದ್ದೇಶಪೂರ್ವಕ ಕೃತ್ಯ ಎಂದು ನಾನು ಭಾವಿಸುತ್ತೇನೆ. ಯಾರಾದರು ಆಕಸ್ಮಿಕವಾಗಿ ಮೂರು ಬಾರಿ ಢಿಕ್ಕಿ ಹೊಡೆಯಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.
ಸಂಬಲ್ಪುರ ಎಸ್ಪಿ ಮುಖೇಶ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಕಸ ವಿಲೇವಾರಿ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ವಾಹನದ ಚಾಲಕನನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.