ಆರೆಸ್ಸೆಸ್ ಕಾರ್ಯಕರ್ತರಲ್ಲಿ ಧೈರ್ಯ ಹುಟ್ಟಿಸಲು ಲಾಠಿ ತರಬೇತಿ ನೀಡುತ್ತೇವೆ: ಮೋಹನ್‌ ಭಾಗವತ್‌

Update: 2025-01-04 13:50 IST
Photo of Mohan Bhagwat

ಮೋಹನ್ ಭಾಗವತ್ (PTI)

  • whatsapp icon

ಹೊಸದಿಲ್ಲಿ: ಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ ನೀಡಲಾಗುವ 'ಲಾಠಿ ತರಬೇತಿ'ಯ ಉದ್ದೇಶವನ್ನು ಸಮರ್ಥಿಸಿರುವ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ʼಕಾರ್ಯಕರ್ತರಲ್ಲಿ ಧೈರ್ಯ ತುಂಬುವುದು ಇದರ ಉದ್ದೇಶವಾಗಿದ್ದು, ಲಾಠಿ ಬೀಸುವ ಕೌಶಲ್ಯವು ಸಾರ್ವಜನಿಕ ಪ್ರದರ್ಶನಕ್ಕಾಗಿ ಅಲ್ಲʼ ಎಂದು ಅವರು ಹೇಳಿದ್ದಾರೆ.

ʼಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ 'ಲಾಠಿ' ಅಥವಾ ಕೋಲನ್ನು ಹೋರಾಟ ಅಥವಾ ಸಾರ್ವಜನಿಕ ಪ್ರದರ್ಶನಕ್ಕಾಗಿ ಬಳಸಲು ತರಬೇತಿ ನೀಡುವುದಿಲ್ಲ, ಆದರೆ ಅದು ಧೈರ್ಯವನ್ನು ತುಂಬುತ್ತದೆ ಹಾಗೂ ದೃಢವಾಗಿರಲು ಕಲಿಸುತ್ತದೆʼ ಎಂದು ಅವರು ಹೇಳಿದರು.

"ಲಾಠಿ ಹಿಡಿಯುವ ವ್ಯಕ್ತಿಯು ಶೌರ್ಯದ ಪ್ರಜ್ಞೆ ಬೆಳೆಸಿಕೊಳ್ಳುತ್ತಾನೆ. ಹಾಗೂ ಅವನು ಹೆದರುವುದಿಲ್ಲ. ಲಾಠಿ ತರಬೇತಿಯು ಬಿಕ್ಕಟ್ಟುಗಳಲ್ಲಿ ದೃಢತೆಯನ್ನು ಕಲಿಸುತ್ತದೆ ಮತ್ತು ದೃಢನಿಶ್ಚಯ, ತಾಳ್ಮೆ ಮತ್ತು ಅಚಲ ಶಕ್ತಿಯೊಂದಿಗೆ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತದೆ" ಎಂದು ಅವರು ಹೇಳಿದರು.

ಇಂದೋರ್‌ನಲ್ಲಿ ನಡೆದ 'ಸ್ವರ್ ಶತಕ ಮಾಲ್ವಾ' ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ದೇಶಭಕ್ತಿಯಿಂದ ಪ್ರೇರಿತರಾದ ಸಂಘದ ಸ್ವಯಂಸೇವಕರು ವಿವಿಧ ವಾದ್ಯಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ರಾಗಗಳು ಮತ್ತು ಸಮರ ಸಂಗೀತವನ್ನು ರಚಿಸಿದ್ದಾರೆ ಎಂದು ಹೇಳಿದರು.

ಈ ಪ್ರಯತ್ನದ ಉದ್ದೇಶ, ದೇಶವು ಪ್ರಪಂಚದಾದ್ಯಂತ ಕಂಡುಬರುವ ಕಲಾತ್ಮಕ ಸಂಪ್ರದಾಯಗಳಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಎಂದು ಅವರು ಹೇಳಿದರು.

"ಭಾರತೀಯ ಸಂಗೀತವನ್ನು ಕೇಳುವುದರಿಂದ ಒಬ್ಬ ವ್ಯಕ್ತಿ ಲೌಕಿಕ ಆಕರ್ಷಣೆಗಳಿಂದ ಮುಕ್ತನಾಗುತ್ತಾನೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾನೆ, ಇದು ಹೇರಳವಾಗಿ ಸಂತೋಷವನ್ನು ತರುತ್ತದೆ. ಭಾರತೀಯ ಸಂಗೀತ ಮತ್ತು ಸಾಂಪ್ರದಾಯಿಕ ಸಂಗೀತವು ಸಾಮರಸ್ಯ, ಶಿಸ್ತು ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News