ಕಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟ ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

Update: 2024-03-31 06:56 GMT

ನರೇಂದ್ರ ಮೋದಿ | Photo: PTI 

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಕಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತು ಎಂಬ ಹೊಸ ಸಂಗತಿಗಳು ಬಯಲಾಗಿವೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಾಧ್ಯಮ ವರದಿಯೊಂದನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಕಣ್ಣು ತೆರೆಸುವ ಹಾಗೂ ಗಾಬರಿ ಹುಟ್ಟಿಸುವ ಸಂಗತಿ! ಕಾಂಗ್ರೆಸ್ ಕಲ್ಲೆದೆಯಿಂದ ಕಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತ್ತು ಎಂಬ ಹೊಸ ಸಂಗತಿಗಳು ಬಯಲಾಗಿವೆ. ಇದು ಎಲ್ಲ ಭಾರತೀಯರನ್ನೂ ಕುಪಿತರನ್ನಾಗಿಸಿದ್ದು, ನಾವು ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ ಎಂಬುದು ಜನರ ಮನಸ್ಸಿನಲ್ಲಿ ಮತ್ತೊಮ್ಮೆ ದೃಢವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿಯು, ದ್ರಾವಿಡರ ರಾಜ್ಯದಲ್ಲಿ ಈ ವಿಷಯದಿಂದ ರಾಜಕೀಯ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದೆ.




 


ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಯಾಗಿ, ಇಂದಿರಾ ಗಾಂಧಿ ಸರಕಾರವು 1974ರಲ್ಲಿ ನೆರೆಯ ಶ್ರೀಲಂಕಾಗೆ ಕಚತೀವು ದ್ವೀಪವನ್ನು ಬಿಟ್ಟುಕೊಟ್ಟಿತ್ತು ಎಂಬ ಉತ್ತರ ದೊರೆತಿದ್ದು, ಈ ಮಾಹಿತಿ ಹಕ್ಕು ಅರ್ಜಿಯ ಮಾಹಿತಿಯನ್ನು ಆಧರಿಸಿ ಮಾಧ್ಯಮ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿದೆ.

“75 ವರ್ಷಗಳು ಕಳೆದರೂ ಭಾರತದ ಐಕ್ಯತೆ, ಸಮಗ್ರತೆ ಹಾಗೂ ಹಿತಾಸಕ್ತಿಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯಾಗಿದೆ” ಎಂದು ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ.

ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಚತೀವು ದ್ವೀಪದ ಮೇಲಿನ ಭಾರತದ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಡಲು ತನಗೆ ಯಾವ ಮುಜುಗರವೂ ಇಲ್ಲ ಎಂದು ಹೇಳಿದ್ದರು ಎಂದೂ ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಚತೀವು ದ್ವೀಪದ ವಿಷಯವು ಭಾರತ ಮತ್ತು ಶ್ರೀಲಂಕಾ ನಡುವಿನ ಬಿಕ್ಕಟ್ಟಿನ ಮೂಲವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News