ಹೊಸದಿಲ್ಲಿ | ಮತದಾರರಿಗೆ ಶೂ ಹಂಚಿಕೆ ವೀಡಿಯೊ ವೈರಲ್: ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ಮತದಾರರಿಗೆ ಶೂಗಳನ್ನು ಹಂಚುತ್ತಿರುವ ವೀಡಿಯೊ ವೈರಲ್ ಬೆನ್ನಲ್ಲೇ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನ ಸಂದೀಪ್ ದೀಕ್ಷಿತ್ ವಿರುದ್ಧ ಬಿಜೆಪಿಯಿಂದ ಪರ್ವೇಶ್ ವರ್ಮಾ ಕಣಕ್ಕಿಳಿದಿದ್ದಾರೆ.
ವಕೀಲ ರಜನೀಶ್ ಭಾಸ್ಕರ್ ಅವರು ನೀಡಿರುವ ವೀಡಿಯೊಗಳನ್ನು ಆಧರಿಸಿ ಚುನಾವಣಾಧಿಕಾರಿಯು ಸ್ಟೇಷನ್ ಹೌಸ್ ಅಧಿಕಾರಿಗೆ ಪರ್ವೇಶ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ವೀಡಿಯೊದಲ್ಲಿ ಪರ್ವೇಶ್ ವರ್ಮಾ ಮಹಿಳೆಯರಿಗೆ ಶೂಗಳನ್ನು ಹಂಚಿರುವುದು ಕಂಡು ಬಂದಿತ್ತು.
ಇದಲ್ಲದೆ, ಬಿಜೆಪಿ ಅಭ್ಯರ್ಥಿಯು ಮಹಿಳಾ ಮತದಾರರಿಗೆ 1,100 ರೂ. ವಿತರಿಸಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ವರ್ಮಾ ಅವರು ಉದ್ಯೋಗ ಮೇಳ ಆಯೋಜಿಸಿದರು, ಜಾಬ್ ಕಾರ್ಡ್ ಗಳನ್ನು ವಿತರಿಸಿದರು ಮತ್ತು ದಿಲ್ಲಿ ಕ್ಷೇತ್ರದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಕನ್ನಡಕವನ್ನು ವಿತರಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಫೆಬ್ರವರಿ 5ರಂದು ದಿಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಸಮಯದಲ್ಲಿ ಅಭ್ಯರ್ಥಿ ಅಥವಾ ಏಜೆಂಟ್ ನೀಡುವ ಯಾವುದೇ ಉಡುಗೊರೆ, ಕೊಡುಗೆ ಅಥವಾ ಭರವಸೆಯು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123ರ ಪ್ರಕಾರ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.