ವಯನಾಡು ಭೂಕುಸಿತದಲ್ಲಿ ನಾಪತ್ತೆಯಾದವರನ್ನು ʼಮೃತರುʼ ಎಂದು ಘೋಷಿಸಲು ನಿರ್ಧರಿಸಿದ ಕೇರಳ ಸರ್ಕಾರ

Update: 2025-01-15 16:54 IST
Photo of Wayanad Landslide

Photo credit: PTI

  • whatsapp icon

ತಿರುವನಂತಪುರಂ: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನಾಪತ್ತೆಯಾದವರನ್ನು 'ಮೃತರು' ಎಂದು ಘೋಷಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

ಮಂಗಳವಾರ ಈ ಕುರಿತು ಕೇರಳ ಸರಕಾರ ಆದೇಶವನ್ನು ಹೊರಡಿಸಿದ್ದು, ನಾಪತ್ತೆಯಾದವರ ಪಟ್ಟಿಯನ್ನು ಪರಿಶೀಲಿಸಲು ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದೆ.

ಸರಕಾರದ ಈ ನಿರ್ಧಾರದಿಂದ ವಯನಾಡು ಭೂಕುಸಿತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಕಾರ್ಯ ಚುರುಕುಗೊಳಿಸಲು ಅನುಕೂಲವಾಗಲಿದೆ. ಸ್ಥಳೀಯ ಮಟ್ಟದ ಸಮಿತಿಯು ಆಯಾ ಪೊಲೀಸ್ ಠಾಣೆಗಳ ಪಂಚಾಯತ್ ಕಾರ್ಯದರ್ಶಿ, ಗ್ರಾಮ ಅಧಿಕಾರಿ ಮತ್ತು ಠಾಣಾಧಿಕಾರಿಗಳನ್ನು ಒಳಗೊಂಡಿರುತ್ತದೆ. ಸಮಿತಿಯು ನಾಪತ್ತೆಯಾದವರ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪರಿಶೀಲನೆಗಾಗಿ ಸಲ್ಲಿಸಲಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪಟ್ಟಿಯನ್ನು ಪರಿಶೀಲಿಸಿ ನಂತರ ರಾಜ್ಯ ಮಟ್ಟದ ಸಮಿತಿಗೆ ರವಾನಿಸಲಿದೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ರಾಜ್ಯ ಮಟ್ಟದ ಸಮಿತಿಯು ಪಟ್ಟಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ರವಾನಿಸಲಿದೆ. ನಂತರ ಸರ್ಕಾರವು ಪಟ್ಟಿಯನ್ನು ಪರಿಶೀಲಿಸಿ ನಾಪತ್ತೆಯಾದವರನ್ನು ಮೃತರೆಂದು ಘೋಷಿಸಿ ಹತ್ತಿರದ ಸಂಬಂಧಿಕರಿಗೆ ಪರಿಹಾರವನ್ನು ಬಿಡುಗಡೆ ಮಾಡಲಿದೆ.

ಕಳೆದ ಜುಲೈ 30ರಂದು ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 263 ಜನರು ಮೃತಪಟ್ಟಿದ್ದು, 35 ಮಂದಿ ನಾಪತ್ತೆಯಾಗಿದ್ದಾರೆ. ಆಯಾ ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ಬಗ್ಗೆ ದಾಖಲಾಗಿರುವ ಎಫ್ ಐಆರ್ ಗಳನ್ನು ನಿಕಟವಾಗಿ ಪರಿಶೀಲಿಸುವಂತೆ ಸ್ಥಳೀಯ ಮಟ್ಟದ ಸಮಿತಿಗೆ ಸೂಚನೆಯನ್ನು ನೀಡಲಾಗಿದೆ.

ತಹಶೀಲ್ದಾರ್ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನಾಪತ್ತೆಯಾದ ವ್ಯಕ್ತಿ ಬಗ್ಗೆ ವಿವರವಾದ ತನಿಖೆ ನಡೆಸಬೇಕು. ಈ ಕುರಿತ ಫಲಿತಾಂಶಗಳನ್ನು ಅಧಿಕೃತ ವೆಬ್ ಸೈಟ್ ಮತ್ತು ಸರ್ಕಾರಿ ಗೆಜೆಟ್ ನಲ್ಲಿ ಪ್ರಕಟಿಸಬೇಕು. ಈ ಕುರಿತು ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗುವುದು, ನಂತರ ವೆಬ್ ಸೈಟ್ ನಲ್ಲಿ ನಾಪತ್ತೆಯಾದವರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಮತ್ತು ಅವರ ನಿಕಟ ಸಂಬಂಧಿಕರಿಗೆ ಮರಣ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News