ಮಣಿಪುರ ಹಿಂಸಾಚಾರ ‘ಸರಕಾರಿ ಪ್ರಾಯೋಜಿತ’ ಎಂದು ಹೇಳಿದ್ದ ಸತ್ಯಶೋಧನಾ ತಂಡದ ವಿರುದ್ಧ ಪ್ರಕರಣ

Update: 2023-07-10 15:53 GMT

ಸಾಂದರ್ಭಿಕ ಚಿತ್ರ | Photo : PTI

ಹೊಸದಿಲ್ಲಿ: ಮಣಿಪುರದಲ್ಲಿಯ ಜನಾಂಗೀಯ ಘರ್ಷಣೆಗಳು ‘ಸರಕಾರಿ ಪ್ರಾಯೋಜಿತ ಹಿಂಸಾಚಾರ ’ದ ಫಲಶ್ರುತಿಯಾಗಿವೆ ಎಂದು ಹೇಳಿದ್ದ ಸತ್ಯಶೋಧನಾ ತಂಡದ ಮೂವರು ಸದಸ್ಯರ ವಿರುದ್ಧ ಇಂಫಾಲ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತಂಡವು ಇತ್ತೀಚಿಗೆ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿತ್ತು ಎಂದು ವರದಿಯಾಗಿದೆ.

ಜು.8ರಂದು ಇಂಫಾಲ ಪೊಲೀಸ್ ಠಾಣೆಯಲ್ಲಿ ಆ್ಯನ್ನಿ ರಾಜಾ,ನಿಶಾ ಸಿದ್ಧು ಮತ್ತು ದೀಕ್ಷಾ ತ್ರಿವೇದಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಮೂವರೂ ಜೂ.20ರಿಂದ ಜು.1ರವರೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯು)ನ ಸತ್ಯಶೋಧನಾ ತಂಡದ ಸದಸ್ಯರಾಗಿದ್ದರು. ರಾಜಾ ಎನ್‌ಎಫ್‌ಐಡಬ್ಲ್ಯುದ ಪ್ರಧಾನ ಕಾರ್ಯದರ್ಶಿಯಾಗಿದ್ದರೆ ಸಿದ್ಧು ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ದ್ವಿವೇದಿ ದಿಲ್ಲಿಯಲ್ಲಿ ನ್ಯಾಯವಾದಿಯಾಗಿದ್ದಾರೆ.

ವರದಿಗಳ ಪ್ರಕಾರ,ಸರಕಾರದ ವಿರುದ್ಧ ಯುದ್ಧ ಸಾರುವುದು, ಪ್ರಚೋದನೆ ಮತ್ತು ಮಾನಹಾನಿ ಸೇರಿದಂತೆ ಐಪಿಸಿಯ ಹಲವಾರು ಕಲಮ್‌ಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಮಹಿಳೆಯರು ನೀಡಿದ್ದ ಹೇಳಿಕೆಗಳಿಗಾಗಿ ಎಲ್.ಲಿಬೆನ್ ಸಿಂಗ್ ಎನ್ನುವವರು ದೂರನ್ನು ದಾಖಲಿಸಿದ್ದಾರೆ.

ಮಣಿಪುರದಲ್ಲಿಯ ಘರ್ಷಣೆಗಳು ಕೋಮು ಹಿಂಸಾಚಾರವಲ್ಲ ಅಥವಾ ಕೇವಲ ಎರಡು ಸಮುದಾಯಗಳ ನಡುವಿನ ಕಲಹವೂ ಅಲ್ಲ. ಅದು ಭೂಮಿ,ಸಂಪನ್ಮೂಲಗಳು ಹಾಗೂ ಮತಾಂಧರು ಮತ್ತು ಉಗ್ರಗಾಮಿಗಳ ಉಪಸ್ಥಿತಿಯ ಪ್ರಶ್ನೆಗಳನ್ನು ಒಳಗೊಂಡಿದೆ. ತನ್ನ ಗುಪ್ತ ಕಾರ್ಪೊರೇಟ್ ಪರ ಅಜೆಂಡಾವನ್ನು ಕಾರ್ಯಗತಗೊಳಿಸಲು ಸರಕಾರವು ಚಾಣಾಕ್ಷತೆಯಿಂದ ತಂತ್ರಗಳನ್ನು ಹೆಣೆದಿತ್ತು ಮತ್ತು ಇದು ಪ್ರಸಕ್ತ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಈ ಮೂವರು ಮಹಿಳೆಯರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಅದನ್ನು ‘ಸರಕಾರಿ ಪ್ರಾಯೋಜಿತ ಹಿಂಸಾಚಾರ ’ ಎಂದು ಬಣ್ಣಿಸಿದ್ದ ಅವರು,ಅದು ದಿಢೀರನೆ ಸಂಭವಿಸಿದ್ದಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೂರ್ಣಪ್ರಮಾಣದ ಅಂತರ್ಯುದ್ಧದಂತಹ ಸ್ಥಿತಿಯನ್ನುಂಟು ಮಾಡಲು ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ಅಪನಂಬಿಕೆ ಮತ್ತು ಆತಂಕದ ಸ್ಪಷ್ಟ ಹಿನ್ನೆಲೆಯನ್ನು ಹುಟ್ಟು ಹಾಕಿದ್ದವು ಎಂದು ಹೇಳಿದ್ದರು.

ಸರಕಾರದ ವಿರುದ್ಧ ಯುದ್ಧಕ್ಕೆ ಜನರನ್ನು ಪ್ರಚೋದಿಸುವ ಮೂಲಕ ಈ ಮಹಿಳೆಯರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರವನ್ನು ಉರುಳಿಸಲು ಸಂಚು ನಡೆಸುತ್ತಿದ್ದಾರೆ ಎನ್ನುವುದನ್ನು ಈ ಹೇಳಿಕೆಗಳು ತೋರಿಸಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News