ಪ್ರಧಾನಿ ಮೋದಿ ಟೀಕಿಸಿ ಲೇಖನ ಪ್ರಕಟಿಸಿದ ಬೆನ್ನಲ್ಲೇ ʼಸೆಂಟರ್ ಫಾರ್ ಪಾಲಿಸಿ ರಿಸರ್ಚ್ʼ ಮುಖ್ಯಸ್ಥೆ ಹುದ್ದೆಯಿಂದ ಕೆಳಗಿಳಿದ ಯಾಮಿನಿ ಅಯ್ಯರ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಟೀಕಿಸಿ ತಾವು ಬರೆದ ಲೇಖನ ಎಕಾನಮಿಸ್ಟ್ (Economist)ನಲ್ಲಿ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಧ್ಯಕ್ಷೆ ಹಾಗೂ ವಿದ್ವಾಂಸೆ ಯಾಮಿನಿ ಅಯ್ಯರ್ ತಮ್ಮ ಹುದ್ದೆಯಿಂದ ಕೆಳಗಿಳಿದ್ದಾರೆಂದು ವರದಿಯಾಗಿದೆ.
“ಯಾಮಿನಿ ಅಯ್ಯರ್ ʼಲೆಮೆಂಟ್ಸ್ ದಿ ಡ್ಯಾಮೇಜ್ ಡನ್ ಟು ಇಂಡಿಯನ್ ಡೆಮಾಕ್ರೆಸಿ ಅಂಡರ್ ನರೇಂದ್ರ ಮೋದಿʼ ಎಂಬ ಅವರ ಲೇಖನ ಮಾರ್ಚ್ 23ರಂದು ʼಎಕಾನಮಿಸ್ಟ್ʼನಲ್ಲಿ ಪ್ರಕಟಗೊಂಡಿತ್ತು. “ಭಾರತ ತನ್ನ 18ನೇ ಸಾರ್ವತ್ರಿಕ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದಂತೆ ದೇಶದ ಮೇಲೆ ಸರ್ವಾಧಿಕಾರದ ಗಾಢ ಛಾಯೆ ಮೂಡುತ್ತಿದೆ,” ಎಂದು ಅವರು ತಮ್ಮ ಲೇಖನದಲ್ಲಿ ಬರೆದಿದ್ದರು.
ಇದಾದ ಕೆಲವೇ ದಿನಗಳಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮಾರ್ಚ್ 26ರಂದು ಹೇಳಿಕೆ ಬಿಡುಗಡೆಗೊಳಿಸಿ ಯಾಮಿನಿ ಅಯ್ಯರ್, ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕಿ ಹುದ್ದೆಯಿಂದ ಮಾರ್ಚ್ 31, 2024ರಂದು ಕೆಳಗಿಳಿಯಲಿದ್ದಾರೆ ಹಾಗೂ ತಮ್ಮ ಸಂಶೋಧನಾ ಆಸಕ್ತಿಗಳತ್ತ ಹೆಚ್ಚು ಗಮನ ಹರಿಸಲಿದ್ದಾರೆಂದು ಸಂಸ್ಥೆ ಹೇಳಿದೆ.
ಸಂಸ್ಥೆಯ ಹಾಗೂ ಮಿನಿಸ್ಟ್ರಿ ಆಫ್ ಜಲ್ ಶಕ್ತಿ ರಿಸರ್ಚ್ ಚೇರ್ ಇದರ ಹಿರಿಯ ಫೆಲ್ಲೋ ಆಗಿರುವ ಡಾ ಶ್ರೀನಿವಾಸ ಚೊಕ್ಕಕುಲ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ.