ಮಣಿಪುರದಲ್ಲಿ ಮತ್ತೆ ಘರ್ಷಣೆ: ಕರ್ಫ್ಯೂ ಜಾರಿ
ಇಂಫಾಲ: ಎರಡು ಬುಡಕಟ್ಟು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ, ಮಣಿಪುರ ರಾಜ್ಯದ ಚುರಚಾಂದ್ಪುರ ಜಿಲ್ಲೆಯಲ್ಲಿ ಅಧಿಕಾರಿಗಳು ಸೋಮವಾರ ಸಂಜೆ ಕರ್ಫ್ಯೂ ಹೇರಿದ್ದಾರೆ. ಸಂಘರ್ಷ ನಿರತ ಎರಡೂ ಗುಂಪುಗಳು ಕುಕಿ-ರೆ ಸಮುದಾಯಕ್ಕೆ ಸೇರಿವೆ.
ತಿಂಗ್ಕಾಂಗ್ಫಲ್ ಗ್ರಾಮದಲ್ಲಿ ಘರ್ಷಣೆ ಸಂಭವಿಸಿದೆ. ಒಂದೇ ಸಮುದಾಯಕ್ಕೆ ಸೇರಿದ ಗುಂಪುಗಳ ನಡುವಿನ ಘರ್ಷಣೆಗೆ ನಿರ್ದಿಷ್ಟ ಕಾರಣಗಳು ಗೊತ್ತಾಗಿಲ್ಲ. ಆದರೆ, ಚುರಚಾಂದ್ಪುರದಲ್ಲಿರುವ ಸಾಮೂಹಿಕ ಸ್ಮಶಾನ ಭೂಮಿಗೆ ಯಾವ ಹೆಸರು ಇಡಬೇಕು ಎನ್ನುವ ವಿಷಯದಲ್ಲಿ ಈ ಎರಡು ಪಂಗಡಗಳ ನಡುವೆ ಭಿನ್ನಾಭಿಪ್ರಾಯ ಇತ್ತೆನ್ನಲಾಗಿದೆ.
ಈ ಸಾಮೂಹಿಕ ಸ್ಮಶಾನದ ಯಶಸ್ಸು ಯಾರಿಗೆ ಸಲ್ಲಬೇಕು ಎನ್ನುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಿವಾದ ಇತ್ತು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಮಶಾನಕ್ಕೆ ‘‘ಕುಕಿ-ರೆ ಹುತಾತ್ಮರ ಸ್ಮಶಾನ’’ ಎಂಬ ಹೆಸರಿಡಬೇಕು ಎಂದು ಗುಂಪು ಬಯಸಿದರೆ, ಅದರ ಹೆಸರು ‘‘ಕುಕಿ ರೆಮಿ ಮಿರೊ ಹಮರ್’’ ಎಂಬುದಾಗಿ ಇರಬೇಕು ಎಂದು ಇನ್ನೊಂದು ಗುಂಪು ವಾದಿಸಿದೆ.
‘‘ಘರ್ಷಣೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಈ ಪ್ರದೇಶದಲ್ಲಿ ಕರ್ಫ್ಯೂ ಹೇರಲಾಗಿದೆ’’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕರ್ಫ್ಯೂ ಫೆಬ್ರವರಿ 18ರವರೆಗೆ ಜಾರಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.
ಮಣಿಪುರದಲ್ಲಿ ಮೆತೈ ಮತ್ತು ಕುಕಿ-ರೆ ಸಮುದಾಯಗಳ ನಡುವೆ ಮೇ ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದೆ. ಪೊಲೀಸ್ ದಾಖಲೆಗಳ ಪ್ರಕಾರ, 175ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 60,000 ಮಂದಿ ತಮ್ಮ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ.
ಹಿಂಸಾಚಾರ ತನಿಖೆಗಳ ಮಾಹಿತಿ ಪಡೆಯಲು ಸಿಬಿಐ ನಿರ್ದೇಶಕ ಮಣಿಪುರಕ್ಕೆ
ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ತನಿಖೆಗಳ ಬಗ್ಗೆ ಮಾಹಿತಿ ಪಡೆಯಲು ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಸೋಮವಾರ ಇಂಫಾಲ ತಲುಪಿದ್ದಾರೆ.
ರಾಜ್ಯ ಪೊಲೀಸರು ನಡೆಸುತ್ತಿದ್ದ 27 ಪ್ರಕರಣಗಳ ವಿಚಾರಣೆಯನ್ನು ಸಿಬಿಐ ವಹಿಸಿಕೊಂಡಿದೆ.
ಪ್ರವೀಣ್ ಸೂದ್ ಸೋಮವಾರ ಸಂಜೆ ಗುವಾಹಟಿಯಿಂದ ಇಂಫಾಲ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಸ್ವಾಗತಿಸಿದರು.
ರಾಜ್ಯದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಸೂದ್ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚೆ ನಡೆಸಿದರು.