ಅದಾನಿ ಪೋರ್ಟ್ಸ್ ಏಕಸ್ವಾಮ್ಯ ಸಾಧಿಸಲು ಗುಜರಾತ್ ಸರಕಾರದ ನೆರವು : ಜೆಪಿಸಿ ತನಿಖೆ ಅಗತ್ಯವೆಂದ ಕಾಂಗ್ರೆಸ್
ಹೊಸದಿಲ್ಲಿ: ಅದಾನಿ ಪೋರ್ಟ್ಸ್ ಏಕಸ್ವಾಮ್ಯ ಸಾಧಿಸಲು ಗುಜರಾತ್ ಸರಕಾರ ನೆರವು ನೀಡಿದೆ ಎಂದು ಬುಧವಾರ ಆರೋಪಿಸಿರುವ ಕಾಂಗ್ರೆಸ್, ಅದಾನಿ ಸಮೂಹ ವಿಷಯದ ಕುರಿತು ಜಂಟಿ ಸದನ ಸಮಿತಿಯಿಂದ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಪುನರುಚ್ಚರಿಸಿದೆ.
ಗುಜರಾತ್ ಸರಕಾರವು ರಿಯಾಯಿತಿ ದರದಲ್ಲಿ 30 ವರ್ಷಗಳ ಅವಧಿಯ ನಿರ್ಮಾಣ-ಮಾಲಕತ್ವ-ನಿರ್ವಹಣೆ-ವರ್ಗಾವಣೆ ಒಪ್ಪಂದ ಅನ್ವಯ ಖಾಸಗಿ ಬಂದರು ಕಂಪನಿಗಳಿಗೆ ಬಂದರುಗಳನ್ನು ಮಂಜೂರು ಮಾಡಿದ್ದು, ಅವುಗಳ ಮಾಲಕತ್ವವು ಒಪ್ಪಂದದ ಅವಧಿ ಪೂರ್ಣಗೊಂಡ ನಂತರ ಗುಜರಾತ್ ಸರಕಾರಕ್ಕೆ ವರ್ಗಾವಣೆಯಾಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಮಾದರಿಯ ಆಧಾರದಲ್ಲಿ ಅದಾನಿ ಪೋರ್ಟ್ಸ್ ಸದ್ಯ ಮುಂದ್ರಾ, ಹಾಝೀರ ಹಾಗೂ ದಹೇಜ್ ಬಂದರುಗಳ ಮೇಲೆ ನಿಯಂತ್ರಣ ಹೊಂದಿದೆ ಎಂದು ಅವರು ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಗೂ ಮುನ್ನ ಅದಾನಿ ಪೋರ್ಟ್ಸ್, ಈ ರಿಯಾಯಿತಿ ಅವಧಿಯನ್ನು ಒಟ್ಟಾರೆಯಾಗಿ 45ರಿಂದ 75 ವರ್ಷಗಳವರೆಗೆ ವಿಸ್ತರಿಸುವಂತೆ ಗುಜರಾತ್ ಸಾಗರ ಮಂಡಳಿಗೆ ಮನವಿ ಮಾಡಿತ್ತು ಎಂದು ಅವರು ಆಪಾದಿಸಿದ್ದಾರೆ.
“ಈ ಮನವಿಯು ಅನುಮತಿ ಇರುವ 50 ವರ್ಷದ ಅವಧಿಯನ್ನು ಮೀರಿತ್ತು. ಆದರೆ, ಗುಜರಾತ್ ಸಾಗರ ಮಂಡಳಿಯು ಈ ಕುರಿತು ಗುಜರಾತ್ ಸರಕಾರಕ್ಕೆ ಮನವಿ ಸಲ್ಲಿಸಲು ಹಿಂಜರಿಕೆ ತೋರಿತು. ಗುಜರಾತ್ ಸಾಗರ ಮಂಡಳಿಯು ಎಷ್ಟು ಅವಸರದಲ್ಲಿತ್ತೆಂದರೆ, ಈ ಅನುಮತಿಯನ್ನು ಮಂಡಳಿಯ ಅನುಮತಿ ಇಲ್ಲದೆಯೇ ನೀಡಿತ್ತು. ಹೀಗಾಗಿ ಅವರ ಕಡತವನ್ನು ಮರಳಿಸಲಾಗಿತ್ತು” ಎಂದು ಅವರು ಆರೋಪಿಸಿದ್ದಾರೆ.
ಇನ್ನೊಂದು ಎಕ್ಸ್ ಪೋಸ್ಟ್ ನಲ್ಲಿ, ಬಾಂಗ್ಲಾದೇಶಕ್ಕೆ ಮಾರಾಟ ಮಾಡಲು ಜಾರ್ಖಂಡ್ ನಲ್ಲಿ ಉತ್ಪಾದಿಸಲಾಗಿದ್ದ ವಿದ್ಯುತ್ ಅನ್ನು ಭಾರತದಲ್ಲಿಯೇ ಮಾರಾಟ ಮಾಡಲು ಅದಾನಿ ಸಂಸ್ಥೆಗೆ ಅನುಮತಿ ನೀಡಲಾಗಿದೆ ಎಂದೂ ಇಂಧನ ಸಚಿವಾಲಯದ ನೆನಪೋಲೆಯನ್ನು ಉಲ್ಲೇಖಿಸಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಆದರೆ, ಅದಾನಿ ಸಮೂಹವು ತನ್ನ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳನ್ನೂ ತಳ್ಳಿ ಹಾಕಿದೆ.