ಮಧ್ಯಪ್ರದೇಶ ಮುಖ್ಯಮಂತ್ರಿ ವಿರುದ್ಧ ‘ರಾಮಾಯಣ’ ನಟನನ್ನು ಕಣಕ್ಕಿಳಿಸಿದ ಕಾಂಗ್ರೆಸ್
Congress Fields 'Ramayana' Actor To Face Madhya Pradesh Chief Minister In Polls
ಭೋಪಾಲ್: ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಪಕ್ಷವು ಜನಪ್ರಿಯ ನಟ ವಿಕ್ರಮ್ ಮಸ್ತಲ್ ರನ್ನು ಕಣಕ್ಕಿಳಿಸಿದೆ. 2008ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಆನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯ ಹನುಮಾನ್ ಪಾತ್ರದಿಂದ ವಿಕ್ರಮ್ ಮಸ್ತಲ್ ಹೆಸರುವಾಸಿಯಾಗಿದ್ದಾರೆ ಎಂದು ndtv.com ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷವಿಂದು ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗಳಿಗೆ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿತು.
ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕಮಲ್ ನಾಥ್ ಅವರನ್ನು ಅವರ ಸ್ವಕ್ಷೇತ್ರವಾದ ಚಿಂದ್ವಾರಾದಿಂದ ಕಣಕ್ಕಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ರ ಪುತ್ರ ಜೈವರ್ಧನ್ ಸಿಂಗ್ ಅವರನ್ನು ರಾಘಿಘಾಟ್ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಲಾಗಿದೆ. ಈ ಹಿಂದಿನ ಕಮಲ್ ನಾಥ್ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು.
ವಿಕ್ರಮ್ ಮಸ್ತಲ್ ಅವರನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಬುಧ್ನಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯ ಪೈಕಿ 47 ಮಂದಿ ಸಾಮಾನ್ಯ ವರ್ಗದವರು, 39 ಮಂದಿ ಇತರೆ ಹಿಂದುಳಿದ ವರ್ಗದವರು, 30 ಮಂದಿ ಪರಿಶಿಷ್ಟ ಪಂಗಡ ಸಮುದಾಯದವರು, 22 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು, ಓರ್ವ ಮುಸ್ಲಿಂ ಹಾಗೂ 19 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಈ ಎಲ್ಲ ಅಭ್ಯರ್ಥಿಗಳ ಪೈಕಿ 65 ಅಭ್ಯರ್ಥಿಗಳು 50 ವರ್ಷಕ್ಕಿಂತ ಕಿರಿಯರಾಗಿದ್ದಾರೆ.
ಇದಕ್ಕೂ ಮುನ್ನ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ 136 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಅದಾಗಲೇ ಪ್ರಕಟಿಸಿದೆ.
ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು 230 ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಗಳನ್ನು ಚುನಾಯಿಸಲು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.