ಯೋಧನಿಗೆ ಪಾವತಿಯಾಗದ ಅಂಗವೈಕಲ್ಯ ಪಿಂಚಣಿ: ಸೇನಾ ಮುಖ್ಯಸ್ಥರಿಗೆ ಎಟಿಎಫ್‌ನಿಂದ ಸಮನ್ಸ್ ಜಾರಿ

Update: 2024-10-09 11:18 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ನ್ಯಾಯಮಂಡಳಿಯ ಪುನರಾವರ್ತಿತ ಆದೇಶಗಳ ಹೊರತಾಗಿಯೂ ಯೋಧನೋರ್ವನಿಗೆ ಅಂಗವೈಕಲ್ಯ ಪಿಂಚಣಿಯನ್ನು ಪಾವತಿಸದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನೆದುರು ಖುದ್ದಾಗಿ ಹಾಜರಾಗುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ(ಎಟಿಎಫ್)ಯ ಪ್ರಧಾನ ಪೀಠವು ರಕ್ಷಣಾ ಕಾರ್ಯದರ್ಶಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಗೆ ಸಮನ್ಸ್ ಹೊರಡಿಸಿದೆ.

ನ್ಯಾಯಮಂಡಳಿಯ ಆದೇಶವನ್ನು ಜಾರಿಗೊಳಿಸುವಲ್ಲಿ ವೈಫಲ್ಯದ ಬಗ್ಗೆ ವಿವರಿಸಲು ಅ.21ರಂದು ತನ್ನ ಮುಂದೆ ಹಾಜರಾಗುವಂತೆ ಎಟಿಎಫ್ ಪೀಠವು ನಿರ್ದೇಶಿಸಿದೆ.

ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಆದೇಶವನ್ನು ಪಾಲಿಸದಿದ್ದರೆ ಪ್ರಕರಣದಲ್ಲಿ ತನ್ನ ಆದೇಶಗಳನ್ನು ಜಾರಿಗೊಳ್ಳುವಂತೆ ಮಾಡಲು ಎಟಿಎಫ್ ನ್ಯಾಯಾಂಗ ನಿಂದನೆ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ ಎಂಬ ನ್ಯಾಯಮಂಡಳಿಯ ವಿಸ್ತ್ರತ ಪೀಠದ ಇತ್ತೀಚಿನ ತೀರ್ಪಿನ ಹಿನ್ನೆಲೆಯಲ್ಲಿ ಈ ನಿರ್ದೇಶನ ಹೊರಬಿದ್ದಿದೆ.

ಈ ಹಿಂದೆ ರಕ್ಷಣಾ ಸಚಿವಾಲಯವು ಎಟಿಎಫ್ ಅಧಿಕಾರವನ್ನು ಪ್ರಶ್ನಿಸಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಆದರೆ ಆದೇಶ ಪಾಲನೆಯನ್ನು ಜಾರಿಗೊಳಿಸುವ ನ್ಯಾಯಮಂಡಳಿಯ ಅಧಿಕಾರವನ್ನು ಎತ್ತಿಹಿಡಿದಿದ್ದ ಉಚ್ಚ ನ್ಯಾಯಾಲಯವು, ಎಟಿಎಫ್ ಆದೇಶವನ್ನು ಪ್ರಶ್ನಿಸುವ ಮುನ್ನ ಸಚಿವಾಲಯದ ಅನುಮೋದನೆಯನ್ನು ಪಡೆಯಲಾಗಿತ್ತೇ ಎನ್ನುವುದನ್ನು ದೃಢೀಕರಿಸಿ ಅಫಿಡವಿಟ್ ಸಲ್ಲಿಸುವಂತೆ ರಕ್ಷಣಾ ಕಾರ್ಯದರ್ಶಿಗೆ ಸೂಚಿಸಿತ್ತು.

ಅಕ್ಟೋಬರ್‌ನಲ್ಲಿ ವಿಚಾರಣೆಯನ್ನು ನಿಗದಿಗೊಳಿಸಿರುವ ಉಚ್ಚ ನ್ಯಾಯಾಲಯವು ತಾನು ನೋಟಿಸನ್ನು ಹೊರಡಿಸುವುದಿಲ್ಲ ಅಥವಾ ಎಟಿಎಫ್ ವಿಚಾರಣೆಗೆ ತಡೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸುವ ಮೂಲಕ ನ್ಯಾಯಾಂಗ ನಿಂದನೆ ಪ್ರಕರಣದ ಮುಂದುವರಿಕೆಗೆ ಅವಕಾಶ ಕಲ್ಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News