ಹರ್ಯಾಣ ಚುನಾವಣಾ ಫಲಿತಾಂಶದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ ಪಾತ್ರವೇನು?

Update: 2024-10-09 12:18 GMT

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ | PC : PTI

ಚಂಡಿಗಡ: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿಯಿದ್ದಾಗ ಅ.1ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ ಗೆ 20 ದಿನಗಳ ಪರೋಲ್ ಮಂಜೂರು ಮಾಡಿದ್ದಕ್ಕಾಗಿ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳಿಂದ ನೇರ ದಾಳಿಗೆ ಗುರಿಯಾಗಿತ್ತು.

ಚುನಾವಣೆ ಸಂದರ್ಭದಲ್ಲಿಯೇ ರಾಮ ರಹೀಮ್‌ಗೆ 15ನೇ ಸಲ ಪರೋಲ್ ನೀಡಲಾಗಿದ್ದು,ಅತ್ಯಾಚಾರ ಮತ್ತು ಕೊಲೆ ಆರೋಪಿಯ ಬೆಂಬಲವನ್ನು ಪಡೆಯಲೆಂದೇ ಬಿಜೆಪಿಯು ಪರೋಲ್ ನೀಡಿದೆ ಎಂದು ಆರೋಪಿಸಲಾಗಿತ್ತು. ಆದರೆ ಅದರಿಂದ ಬಿಜೆಪಿ ಮಾತ್ರವಲ್ಲ,ಕಾಂಗ್ರೆಸ್ ಕೂಡ ಲಾಭವನ್ನು ಗಳಿಸಿದೆ ಎನ್ನುವುದನ್ನು ಚುನಾವಣಾ ಫಲಿತಾಂಶಗಳು ತೋರಿಸಿವೆ.

ಡೇರಾ ಅನುಯಾಯಿಗಳ ನೆಲೆ ಎನ್ನಲಾಗಿರುವ 28 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕಾಂಗ್ರೆಸ್,10 ಬಿಜೆಪಿ,ಎರಡು ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಮತ್ತು ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿವೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಶೇ.53.57,ಬಿಜೆಪಿಗೆ ಶೇ.35.71,ಐಎನ್‌ಎಲ್‌ಡಿಗೆ ಶೇ.7 ಮತ್ತು ಪಕ್ಷೇತರ ಅಭ್ಯರ್ಥಿಗೆ ಶೇ.3.57ರಷ್ಟು ಮತಗಳು ಲಭಿಸಿವೆ. ಹೆಚ್ಚಿನ ಹರ್ಯಾಣ ಕಾಂಗ್ರೆಸ್ ನಾಯಕರು ಗುರ್ಮೀತ್ ಸಿಂಗ್‌ ಪರೋಲ್ ಬಗ್ಗೆ ಧ್ವನಿಯೆತ್ತಿರದಿರಲು ಇದು ಒಂದು ಕಾರಣವಾಗಿರಬಹುದು ಎನ್ನಲಾಗಿದೆ.

ಫತೇಹಾಬಾದ್,ಕೈಥಾಲ್,ಕುರುಕ್ಷೇತ್ರ,ಸಿರ್ಸಾ,ಕರ್ನಾಲ್ ಮತ್ತು ಹಿಸಾರ್ ಜಿಲ್ಲೆಗಳಲ್ಲಿ ಹರಡಿರುವ ಈ 28 ಕ್ಷೇತ್ರಗಳಲ್ಲಿ ಕಾಂಗ್ರಸ್ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಗೆದ್ದಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಡೇರಾ ಅನುಯಾಯಿಗಳಿದ್ದಾರೆ.

ಅ.3ರಂದು ಡೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ ಬಿಜೆಪಿಗೆ ಮತ ಹಾಕುವಂತೆ ಡೇರಾ ಅಧಿಕಾರಿಗಳಿಗೆ ಸೂಚಿಸಿದ್ದ ಎಂದು ಮೂಲಗಳು ತಿಳಿಸಿದ್ದರೆ,ಮಾಧ್ಯಮ ವರದಿಗಳು ಸತ್ಸಂಗವೊಂದರಲ್ಲಿ ಈ ಸಂದೇಶವನ್ನು ರವಾನಿಸಲಾಗಿತ್ತು ಮತ್ತು ಪ್ರತಿಯೊಬ್ಬರೂ ಕನಿಷ್ಠ ಐವರು ಮತದಾರರನ್ನು ಮತಗಟ್ಟೆಗೆ ಕರೆತರುವಂತೆ ಅನುಯಾಯಿಗಳಿಗೆ ಸೂಚಿಸಲಾಗಿತ್ತು ಎಂದು ಹೇಳಿವೆ.

ಗುರ್ಮೀತ್ ಸಿಂಗ್‌ ಪ್ರಚಾರ ಮಾಡುವುದನ್ನು ಅಥವಾ ಆನ್‌ಲೈನ್‌ನಲ್ಲಿ ಸತ್ಸಂಗ ನಡೆಸುವುದನ್ನು ಚುನಾವಣಾ ಆಯೋಗವು ನಿಷೇಧಿಸಿದ್ದರಿಂದ ವಾಸ್ತವದಲ್ಲಿ ಈ ಸತ್ಸಂಗವನ್ನು ಆತನೇ ಆಯೋಜಿಸಿದ್ದನೇ ಎನ್ನುವುದು ಸ್ಪಷ್ಟವಾಗಿಲ್ಲ.

ಪಂಥವು ಸುಮಾರು 1.25 ಕೋ.ಅನುಯಾಯಿಗಳನ್ನು ಹೊಂದಿದೆ ಎಂದು ಡೇರಾ ಮೂಲಗಳು ಅಂದಾಜಿಸಿವೆ. ಡೇರಾದ 38 ಶಾಖೆಗಳ ಪೈಕಿ 21 ಹರ್ಯಾಣದಲ್ಲಿಯೇ ಇವೆ.

ಧಾರ್ಮಿಕ ಪಂಥವಾಗಿದ್ದರೂ ಡೇರಾ ಸಚ್ಚಾ ಸೌದಾ ಗಮನಾರ್ಹ ರಾಜಕೀಯ ಹಿಡಿತವನ್ನು ಹೊಂದಿದ್ದು,ಅದರ ರಾಜಕೀಯ ವಿಭಾಗವು ರಾಮ ರಹೀಮ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಂಥವು ಈ ಹಿಂದೆ ಶಿರೋಮಣಿ ಅಕಾಲಿ ದಳ,ಬಿಜೆಪಿ ಮತ್ತು ಕಾಂಗ್ರೆಸ್‌ನ್ನು ಬೆಂಬಲಿಸಿತ್ತು.

2007ರ ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಿದ್ದ ಡೇರಾ,2014ರಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿತ್ತು. 2015ರಲ್ಲಿ ದಿಲ್ಲಿ ಮತ್ತು ಬಿಹಾರ ಚುನಾವಣೆಗಳಲ್ಲಿ ಡೇರಾ ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದು,ಅದರ ಸುಮಾರು 3,000 ಅನುಯಾಯಿಗಳು ಬಿಹಾರದಲ್ಲಿ ಬಿಜೆಪಿಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಡೇರಾ ಬೃಹತ್ ಪ್ರಮಾಣದಲ್ಲಿ ಕೆಳಜಾತಿಗಳ ಅನುಯಾಯಿಗಳನ್ನು ಹೊಂದಿರುವುದು ಅದರ ರಾಜಕೀಯ ಪ್ರಭಾವಕ್ಕೆ ಕಾರಣವಾಗಿದೆ. ಇವರಲ್ಲಿ ಮಜಹಬಿ ಸಿಕ್ಖ(ಪರಿವರ್ತಿತ ಸಿಕ್ಖರು)ರಂತಹ ದಲಿತರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ.

ರಾಜಕೀಯ ವಿಶ್ಲೇಷಕರು ಗಮನಿಸಿರುವಂತೆ,ಹರ್ಯಾಣದಲ್ಲಿ ಮೇಲ್ಜಾತಿಯ ಮತಗಳು ಸಾಮಾನ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಿಭಜನೆಯಾಗುತ್ತಿದ್ದರೆ ಕೆಳಜಾತಿಗಳ ಡೇರಾ ಅನುಯಾಯಿಗಳು ತಮ್ಮ ನಾಯಕನ ಸೂಚನೆಯ ಮೇರೆಗೆ ಮತಗಳನ್ನು ಚಲಾಯಿಸುತ್ತಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News