ಹರ್ಯಾಣ ವಿಧಾನಸಭಾ ಚುನಾವಣೆ | ಅಹಂಕಾರ, ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡಿದ್ದು ಚುನಾವಣಾ ಹಿನ್ನಡೆಗೆ ಕಾರಣ : ಕಾಂಗ್ರೆಸ್ ಸೋಲಿನ ಕುರಿತು ಟಿಎಂಸಿ ಸಂಸದ

Update: 2024-10-09 13:42 GMT

ಟಿಎಂಸಿ ಸಂಸದ‌ ಸಾಕೇತ್ ಗೋಖಲೆ | PC : PTI

ಹೊಸದಿಲ್ಲಿ : ಕಾಂಗ್ರೆಸ್‌ನ ಚುನಾವಣಾ ಸೋಲಿನ ಬಗ್ಗೆ ವಂಗ್ಯವಾಡಿರುವ ಟಿಎಂಸಿ ಸಂಸದ ಸಾಕೇತ್ ಗೋಖಲೆಯವರು, ತಾವು ಗೆಲ್ಲುತ್ತೇವೆ ಎಂದು ಪ್ರಾದೇಶಿಕ ಪಕ್ಷಗಳು ಭರವಸೆ ಹೊಂದಿರುವ ಕ್ಷೇತ್ರಗಳಲ್ಲಿ ಅವುಗಳಿಗೆ ಅವಕಾಶ ನೀಡದ ಧೋರಣೆಯು ಅದರ ಚುನಾವಣಾ ಸೋಲುಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಅಹಂಕಾರ, ಹಕ್ಕುಸಾಧನೆ ಮತ್ತು ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡುವುದು ಚುನಾವಣಾ ದುರಂತಗಳನ್ನು ಆಹ್ವಾನಿಸುತ್ತವೆ ಎಂದು ಗೋಖಲೆ ಬುಧವಾರ ಯಾವುದೇ ಪಕ್ಷವನ್ನು ಹೆಸರಿಸದೆ ಎಕ್ಸ್ ಪೋಸ್ಟ್‌ ನಲ್ಲಿ ಕುಟುಕಿದ್ದಾರೆ.

‘ನಾವು ಗೆಲ್ಲುತ್ತೇವೆ ಎಂದು ಭಾವಿಸಿದ್ದರೆ ನಾವು ಯಾವುದೇ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ನೀಡುವುದಿಲ್ಲ,ಆದರೆ ನಾವು ದುರ್ಬಲವಾಗಿರುವ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನಮಗೆ ಅವಕಾಶ ನೀಡಬೇಕು ಎಂಬ ಧೋರಣೆಯು ಚುನಾವಣಾ ಸೋಲುಗಳಿಗೆ ಕಾರಣವಾಗುತ್ತದೆ’ ಎಂದು ಗೋಖಲೆ ಹೇಳಿದ್ದಾರೆ.

ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಮಂಗಳವಾರ ಕಾಂಗ್ರೆಸ್‌ನ ಚುನಾವಣಾ ಕಾರ್ಯತಂತ್ರವನ್ನು ಪ್ರಶ್ನಿಸಿದ್ದರು. ಹರ್ಯಾಣದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿದ್ದ ಆಪ್‌ನ ವರಿಷ್ಠ,ಯಾರೇ ಆದರೂ ಅತಿಯಾದ ಆತ್ಮವಿಶ್ವಾಸ ಹೊಂದಿರಬಾರದು ಎನ್ನುವುದು ಇತ್ತೀಚಿನ ಸುತ್ತಿನ ಚುನಾವಣೆಗಳ ದೊಡ್ಡ ಪಾಠವಾಗಿದೆ ಎಂದು ಹೇಳಿದ್ದರು.

ಹರ್ಯಾಣದಲ್ಲಿಯ ಚುನಾವಣಾ ಸೋಲಿನ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು, ಮುಂಬರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳಲ್ಲಿ ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಎಲ್ಲ ಪಾಲುದಾರರೊಂದಿಗೆ ಸಾಗಬೇಕಿದೆ ಎಂದರು.

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಟಿಎಂಸಿ ಲೋಕಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಹೋರಾಡಿದ್ದರೆ, ಕಾಂಗ್ರೆಸ್ ಸಿಪಿಎಂ ಮತ್ತು ಇತರ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News