ʼಎಕ್ಸ್ʼ ಫಾಲೋವರ್ಸ್ ಸಂಖ್ಯೆ 5 ಕೋಟಿ ತಲುಪಲು ಸಲಹೆ ನೀಡಿ ಎಂದ ನಟ ಅಮಿತಾಭ್ ಬಚ್ಚನ್

Update: 2025-04-16 12:52 IST
ʼಎಕ್ಸ್ʼ ಫಾಲೋವರ್ಸ್ ಸಂಖ್ಯೆ 5 ಕೋಟಿ ತಲುಪಲು ಸಲಹೆ ನೀಡಿ ಎಂದ ನಟ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ (Photo: PTI)

  • whatsapp icon

ಮುಂಬೈ: ತನ್ನ ಎಕ್ಸ್ ಫಾಲೋವರ್ಸ್ ಸಂಖ್ಯೆ ಏನು ಮಾಡಿದರೂ 4.9 ಕೋಟಿಯಿಂದ ಐದು ಕೋಟಿಗೆ ತಲುಪುತ್ತಿಲ್ಲಾ ಎಂದು ಖ್ಯಾತ ನಟ ಅಮಿತಾಭ್ ಬಚ್ಚನ್ ಪೋಸ್ಟ್‌ ಮಾಡಿ ಜನರಿಂದ ಸಲಹೆ ಕೇಳಿದ್ದಾರೆ.

"ಬಹಳ ಪ್ರಯತ್ನ ಪಟ್ಟೆ, ಆದರೆ ಈ 49 ಮಿಲಿಯನ್ (4.9 ಕೋಟಿ) ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚುತ್ತಲೇ ಇಲ್ಲ. ನಿಮ್ಮಲ್ಲಿ ಏನಾದರೂ ಉಪಾಯ ಇದ್ದರೆ ಹೇಳಿ" ಎಂದು ಅಮಿತಾಭ್ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟ್ವಿಟರ್ ನಲ್ಲಿ ಹತ್ತಿಪ್ಪತ್ತು ಸಾವಿರ ಫಾಲೋವರ್ಸ್ ಪಡೆಯೋದೇ ದೊಡ್ಡ ಸವಾಲು. ಹಾಗಿರುವಾಗ ತನಗಿರುವ 4.9 ಕೋಟಿ ಫಾಲೋವರ್ಸ್ ಸಂಖ್ಯೆ ಅಮಿತಾಭ್ ಗೆ ಸಣ್ಣದಾಗಿ ಕಾಣುತ್ತಿದೆ. ಅದು 5 ಕೋಟಿ ದಾಟುವ ಗಳಿಗೆಗಾಗಿ ಅವರು ಕಾತರದಿಂದ ಕಾಯುತ್ತಿದ್ದಾರೆ.

ಫಾಲೋವರ್ಸ್ ಸಂಖ್ಯೆ ಹೆಚ್ಚಲು ಉಪಾಯ ಕೊಡಿ ಎಂದು ಕೇಳಿದ್ದಕ್ಕೆ ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮೊಹಮ್ಮದ್ ಝುಬೇರ್ ಅವರು ಅಮಿತಾಭ್ ಗೆ ಸಲಹೆಯೊಂದನ್ನು ನೀಡಿದ್ದಾರೆ.

"ಸರ್, ಸ್ವಲ್ಪ ಧೈರ್ಯ ಮಾಡಿ ಪೆಟ್ರೋಲ್, ಡೀಸೆಲ್ ಹಾಗು LPG ( ಬೆಲೆ ಏರಿಕೆ ) ಬಗ್ಗೆ ಜೋಕ್ ಗಳನ್ನು ಶೇರ್ ಮಾಡಿ. 5 ಕೋಟಿ ಫಾಲೋವರ್ಸ್ ಎರಡೇ ದಿನಗಳಲ್ಲಿ ಆಗಿ ಬಿಡುತ್ತದೆ" ಎಂದು ಝುಬೇರ್ ಹೇಳಿದ್ದಾರೆ.

ಅಮಿತಾಭ್ ಬಚ್ಚನ್ ಯುಪಿಎ ಸರಕಾರ ಇರುವಾಗ ಪ್ರತಿ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿದಾಗ ಅದನ್ನು ಟೀಕಿಸುವ ಜೋಕ್ ಗಳನ್ನು ಟ್ವೀಟ್ ಮಾಡುತ್ತಿದ್ದರು. "ಪೆಟ್ರೋಲ್ ಎಷ್ಟು ಹಾಕಬೇಕು ಎಂದು ಪಂಪ್ ಸಿಬ್ಬಂದಿ ಕೇಳಿದ್ದಕ್ಕೆ ವಾಹನದ ಮೇಲೆ ಮೂರ್ನಾಲ್ಕು ರೂಪಾಯಿಯದ್ದು ಹಾಕು, ಅದಕ್ಕೆ ಬೆಂಕಿ ಕೊಡಬೇಕಾಗಿದೆ" ಎಂದು ಮುಂಬೈಯ ಜನ ಹೇಳುತ್ತಿದ್ದಾರೆ ಎಂದು ಅಮಿತಾಭ್ ಟ್ವೀಟ್ ಮಾಡಿದ್ದರು. ಆಗ ಪೆಟ್ರೋಲ್ ಬೆಲೆ ಇದ್ದಿದ್ದು 78.57 ರೂಪಾಯಿ.

ಆದರೆ ಈಗ ಪೆಟ್ರೋಲ್ ಬೆಲೆ ನೂರು ರೂಪಾಯಿ ಆದಾಗಲೂ ನೂರು ರೂಪಾಯಿ ದಾಟಿದಾಗಲೂ ಅಮಿತಾಭ್ ಒಂದೇ ಒಂದು ಟ್ವೀಟ್ ಮಾಡಿಲ್ಲ. ಅಮಿತಾಭ್ ಮಾತ್ರವಲ್ಲ, ಅನುಪಮ್ ಖೇರ್, ಅಕ್ಷಯ್ ಕುಮಾರ್ ಸಹಿತ ಬಾಲಿವುಡ್ ನ ಹಲವು ನಟರು ಯುಪಿಎ ಸರಕಾರ ಇದ್ದಾಗ ಬೆಲೆ ಏರಿಕೆ ಬಗ್ಗೆ ಟೀಕಿಸಿದ್ದಾರೆ. ಆದರೆ ಈಗ ಬೆಲೆ ಏರಿಕೆ ಅತ್ಯಂತ ಹೆಚ್ಚಿರುವಾಗ ಅದೇ ನಟರು ಒಂದೇ ಒಂದು ಟ್ವೀಟ್‌ ಕೂಡಾ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮಿತಾಭ್ ಅವರ ಈ ಸಲಹೆ ಕೇಳಿದ ಟ್ವೀಟ್ ಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಲವರು ಎಲಾನ್ ಮಸ್ಕ್ ರ ಎಐ ಟೂಲ್ ಗ್ರೋಕ್ ಗೆ ಪ್ರಶ್ನೆ ಕೇಳಿ ಅಮಿತಾಭ್ ಗೆ ಸಲಹೆ ಕೊಡು ಎಂದಿದ್ದಾರೆ. ಇನ್ನೂ ಕೆಲವರು ಅಮಿತಾಭ್ ಹಾಗು ರೇಖಾ ಅವರ ಹಳೆಯ ಪ್ರೇಮ ಕತೆಯನ್ನು ನೆನಪಿಸಿ ರೇಖಾ ಜೊತೆ ಫೋಟೊ ಹಾಕಿ ಎಂದಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತಾಡಿ ಎಂದೂ ಝುಬೇರ್ ಅಲ್ಲದೆ ಇನ್ನೂ ಕೆಲವರು ಸಲಹೆ ಕೊಟ್ಟಿದ್ದಾರೆ.

4.9 ಕೋಟಿ ಫಾಲೋವರ್ಸ್ ಅಂದ್ರೆ ಸಣ್ಣ ಸಂಖ್ಯೆ ಏನಲ್ಲ. ಭಾರತದಲ್ಲಿ ಹತ್ತು ಕೋಟಿಗೂ ಹೆಚ್ಚು ಫಾಲೋವರ್ಸ್ ಇರುವ ಪ್ರಧಾನಿ ಮೋದಿ ಹಾಗು ಸುಮಾರು ಆರು ಕೋಟಿ ಫಾಲೋವರ್ಸ್ ಇರುವ ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಮೂರನೇ ಅತಿ ಹೆಚ್ಚು ಫಾಲೋವರ್ಸ್ ಇರುವ ಸೆಲೆಬ್ರಿಟಿ ಅಮಿತಾಭ್ ಬಚ್ಚನ್.

ಸಲಹೆ ಕೇಳಿದ ಬಳಿಕ ಅಮಿತಾಭ್ ಇನ್ನೂ ಎರಡು ಟ್ವೀಟ್ ಮಾಡಿದ್ದಾರೆ. ಒಂದರಲ್ಲಿ "ನೀವೆಲ್ಲರೂ ಕೊಟ್ಟ ಸಲಹೆಗೆ ಧನ್ಯವಾದಗಳು. ಆದರೆ ಒಂದೇ ಒಂದು ಸಲಹೆ ಉಪಯೋಗಕ್ಕೆ ಬರಲಿಲ್ಲ" ಎಂದು ಹೇಳಿದರೆ ಇನ್ನೊಂದು ಟ್ವೀಟ್ ನಲ್ಲಿ " ಫಾಲೋವರ್ಸ್ ಹೆಚ್ಚಿಸುವ ಉಪಾಯ ಈಗ ನನಗೆ ಗೊತ್ತಾಯಿತು, ಕಡಿಮೆ ಮಾತಾಡಬೇಕು, ಕಡಿಮೆ ಬರೀಬೇಕು " ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News