ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ : ಬಾಲಿವುಡ್ ನಟ ಸನ್ನಿ ಡಿಯೋಲ್ ಸಹಿತ ʼಜಾಟ್ʼ ಚಿತ್ರತಂಡದ ವಿರುದ್ಧ ಪ್ರಕರಣ ದಾಖಲು

Photo credit: X/@Boxoffice Fever
ಹೊಸದಿಲ್ಲಿ : 'ಜಾಟ್' ಚಿತ್ರದ ದೃಶ್ಯದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ, ವಿನೀತ್ ಕುಮಾರ್ ಸಿಂಗ್, ನಿರ್ದೇಶಕ ಗೋಪಿಚಂದ್ ಮತ್ತು ನಿರ್ಮಾಪಕ ನವೀನ್ ಯೆರ್ನೇನಿ ವಿರುದ್ಧ ಜಲಂಧರ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಲಂಧರ್‌ನ ಫೋಲ್ದಿವಾಲ್ ಗ್ರಾಮದ ನಿವಾಸಿ ವಿಕಲ್ಪ್ ಗೋಲ್ಡ್ ನೀಡಿರುವ ದೂರಿನ ಮೇರೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
'ಜಾಟ್' ಚಿತ್ರದಲ್ಲಿ ಲಾರ್ಡ್ ಜೀಸಸ್ ಕ್ರೈಸ್ಟ್‌ಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಸಮುದಾಯದ ಜನರು ಪೊಲೀಸ್ ಕಮಿಷನರ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು. ಈ ಕುರಿತು ಪ್ರಕರಣವನ್ನು ದಾಖಲಿಸುವಂತೆ ಮನವಿ ಮಾಡಿದ್ದರು.
ಪೊಲೀಸರಿಗೆ ನೀಡಿರುವ ದೂರಿನಲ್ಲಿ, 'ಜಾಟ್' ಚಿತ್ರದಲ್ಲಿನ ಶಿಲುಬೆಗೇರಿಸುವ ದೃಶ್ಯವು ಜೀಸಸ್ ಕ್ರೈಸ್ಟ್ ಗೆ ಅಪಹಾಸ್ಯ ಮಾಡುತ್ತದೆ. ಇದರಿಂದ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಲಾಗಿದೆ.