ʼಸಿಐಡಿʼಯಲ್ಲಿ ಎಸಿಪಿ ಪ್ರದ್ಯುಮನ್ ಪಾತ್ರಕ್ಕೆ ವಿದಾಯ : ಸೋನಿ ಟಿವಿ ಪೋಸ್ಟ್ ಬೆನ್ನಲ್ಲೇ ಆಘಾತ ವ್ಯಕ್ತಪಡಿಸಿದ ಅಭಿಮಾನಿಗಳು!

Photo | hindustantimes
ಹೊಸದಿಲ್ಲಿ : ಸಿಐಡಿ ಸೀರಿಯಲ್‌ನಲ್ಲಿ ಎಸಿಪಿ ಪ್ರದ್ಯುಮನ್ ಪಾತ್ರದ ವಿದಾಯದ ಬಗ್ಗೆ ಸೋನಿ ಟಿವಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಆಘಾತವನ್ನು ವ್ಯಕ್ತಪಡಿಸಿದರು.
ಅಂತಹ ಯಾವುದೇ ಬೆಳವಣಿಗೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಹಿರಿಯ ನಟ ಶಿವಾಜಿ ಸತಮ್ ಸ್ವತಃ ಹೇಳಿಕೊಂಡರೆ, ಸೋನಿ ಟಿವಿಯ ಅಧಿಕೃತ ಪೇಜ್ ಎಸಿಪಿ ಪ್ರದ್ಯುಮನ್ ಪಾತ್ರದ ವಿದಾಯದ ಬಗ್ಗೆ ದೃಢಪಡಿಸಿದೆ. ಶನಿವಾರ ರಾತ್ರಿ ಸೋನಿ ಟಿವಿ ಎಸಿಪಿ ಪ್ರದ್ಯುಮನ್ ಅವರ ಚಿತ್ರವನ್ನು ಹಂಚಿಕೊಂಡಿದೆ. ಅದರಲ್ಲಿ ಎಸಿಪಿ ಪ್ರದ್ಯುಮನ್ ಅವರ ಪ್ರೀತಿಯ ಸ್ಮರಣೆಯಲ್ಲಿ.. ಎಂದಿಗೂ ಮರೆಯಲಾಗದ ನಷ್ಟ. ಯುಗದ ಅಂತ್ಯ… ACP ಪ್ರದ್ಯುಮನ್ (1998-2025) ಎಂದು ಸಂದೇಶದಲ್ಲಿ ಬರೆಯಲಾಗಿದೆ.
ಈ ಸಂದೇಶಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ಅನೇಕರು ಎಸಿಪಿ ಪ್ರದ್ಯುಮನ್ ಪಾತ್ರದ ನಿರ್ಗಮನದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಲಕ್ಷಾಂತರ ಜನರಿಗೆ, ACP ಪ್ರದ್ಯುಮನ್ ಕೇವಲ ಕಾಲ್ಪನಿಕ ಪಾತ್ರವಾಗಿರಲಿಲ್ಲ. ಅವರು ಶಕ್ತಿ, ಬುದ್ಧಿವಂತಿಕೆ ಮತ್ತು ನ್ಯಾಯದ ಸಂಕೇತವಾಗಿದ್ದರು.
ಅಭಿಮಾನಿಯೋರ್ವರು ಈ ರೀತಿ ಪ್ರತಿಕ್ರಿಯಿಸಿ, ಸೋನಿ ಟಿವಿ ಈಗೇಕೆ ಮಾಡುತ್ತಿದೆ? ಎಸಿಪಿ ಪ್ರದ್ಯುಮನ್ ಅವರನ್ನು ಏಕೆ ಕೊಲ್ಲುತ್ತೀರಿ? ಅದು ಕೇವಲ ಪಾತ್ರವಾಗಿರಲಿಲ್ಲ. ನಮ್ಮ ಜೀವನದ ಭಾಗವಾಗಿತ್ತು. 25 ವರ್ಷಗಳ ಕಾಲ ಅವರು ಅಪರಾಧದ ವಿರುದ್ಧ ಹೋರಾಡಿದರು. ಘನತೆಯಿಂದ ಪಾತ್ರವನ್ನು ಮುನ್ನಡೆಸಿದರು. ಈಗ ನೀವು ಆ ಪಾತ್ರವನ್ನು ಈ ರೀತಿ ಕೊನೆಗೊಳಿಸಲು ನಿರ್ಧರಿಸಿದ್ದೀರಾ? ಅವರಿಗೆ ನಿವೃತ್ತಿ ಅಥವಾ ಶಾಂತಿಯುತ ವಿದಾಯ ನೀಡಬಹುದಿತ್ತು ಎಂದು ಹೇಳಿದರು.
ಮತ್ತೊಂದು ಭಾವನಾತ್ಮಕ ಪೋಸ್ಟ್‌ನಲ್ಲಿ ವ್ಯಕ್ತಿಯೋರ್ವ, RIP ಲೆಜೆಂಡ್ ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಮತ್ತೊಂದು ಟ್ವೀಟ್‌ನಲ್ಲಿ, ಶಿವಾಜಿ ಸರ್ ವಿರಾಮ ತೆಗೆದುಕೊಳ್ಳುತ್ತಿದ್ದರೆ, ನನಗೆ ಯಾವುದೇ ತೊಂದರೆಯಿಲ್ಲ. ಶಿವಾಜಿ ಸರ್ ಬದಲಿಗೆ ಮತ್ತೋರ್ವರು ಎಸಿಪಿಯಾಗಿ ಬರುವುದನ್ನು ಸಹಿಸಲು ಸಾಧ್ಯವಿಲ್ಲ. ಶಿವಾಜಿ ಸರ್ ದಯವಿಟ್ಟು ವಿರಾಮದ ನಂತರ ಹಿಂತಿರುಗಿ ಎಂದು ಹೇಳಿದರು.