ಪೋಲಿಸ್ ಕ್ರೌರ್ಯವನ್ನು ಚಿತ್ರಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಮೆಚ್ಚುಗೆ ಪಡೆದ ‘ಸಂತೋಷ್’ ಚಿತ್ರಕ್ಕೆ ಭಾರತದಲ್ಲಿ ನಿಷೇಧ

Update: 2025-03-27 15:35 IST
ಪೋಲಿಸ್ ಕ್ರೌರ್ಯವನ್ನು ಚಿತ್ರಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಮೆಚ್ಚುಗೆ ಪಡೆದ ‘ಸಂತೋಷ್’ ಚಿತ್ರಕ್ಕೆ ಭಾರತದಲ್ಲಿ ನಿಷೇಧ

Photo credit: indiatoday.in

  • whatsapp icon

ಹೊಸದಿಲ್ಲಿ: ದೇಶದ ಪೋಲಿಸ್ ಪಡೆಯಲ್ಲಿನ ಸ್ತ್ರೀದ್ವೇಷ, ಇಸ್ಲಾಮೊಫೋಬಿಯಾ ಮತ್ತು ಹಿಂಸಾಚಾರವನ್ನು ಬಿಂಬಿಸಿದ್ದಕ್ಕಾಗಿ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿರುವ ‘ಸಂತೋಷ್’ ಚಿತ್ರದ ಬಿಡುಗಡೆಯನ್ನು ಭಾರತೀಯ ಚಲನಚಿತ್ರ ಸೆನ್ಸರ್ ಮಂಡಳಿ ನಿರ್ಬಂಧಿಸಿದೆ.

ಬ್ರಿಟಿಷ್-ಭಾರತೀಯ ನಿರ್ಮಾಪಕಿ ಸಂಧ್ಯಾ ಸೂರಿ ಅವರ ಕಥೆ ಮತ್ತು ನಿರ್ದೇಶನವನ್ನು ಹೊಂದಿರುವ ‘ಸಂತೋಷ್’ ಉತ್ತರ ಭಾರತದ ಹಿನ್ನೆಲೆಯನ್ನು ಹೊಂದಿದ್ದು,ಪೋಲಿಸ್ ಪಡೆಗೆ ಸೇರ್ಪಡೆಗೊಂಡು ದಲಿತ ಯುವತಿಯ ಕೊಲೆ ಪ್ರಕರಣದ ತನಿಖೆ ನಡೆಸುವ ಯುವ ವಿಧವೆಯ ಪಾತ್ರಕ್ಕಾಗಿ ಅಂತರರಾಷ್ಟ್ರೀಯ ಪ್ರಶಂಸೆಯನ್ನು ಗಳಿಸಿದೆ.

ಚಿತ್ರವು ಭಾರತೀಯ ಪೋಲಿಸ್ ಪಡೆಯಲ್ಲಿನ ಅತ್ಯಂತ ಹೀನ ಅಂಶಗಳ ಆಳವಾದ ಕಾಲ್ಪನಿಕ ಚಿತ್ರಣವಾಗಿದ್ದು,‌ ಆಳವಾಗಿ ಬೇರೂರಿರುವ ಸ್ತ್ರೀದ್ವೇಷ, ದಲಿತರ ವಿರುದ್ಧ ತಾರತಮ್ಯ ಹಾಗೂ ಪೋಲಿಸ್ ಅಧಿಕಾರಿಗಳಿಂದ ಸಾಮಾನ್ಯವಾಗಿ ನಡೆಯುವ ದೌರ್ಜನ್ಯ ಮತ್ತು ಹಿಂಸೆಯನ್ನು ಬಿಂಬಿಸಿದೆ. ಚಿತ್ರವು ಭಾರತದಲ್ಲಿಯ, ವಿಶೇಷವಾಗಿ ಕೆಳಜಾತಿಗಳ ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಮ್ ವಿರೋಧಿ ಪೂರ್ವಾಗ್ರಹವನ್ನು ಮುನ್ನೆಲೆಗೆ ತಂದಿದೆ.

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಚೊಚ್ಚಲ ಪ್ರವೇಶದೊಂದಿಗೆ ‌ʼಸಂತೋಷ್ʼ ಚಿತ್ರವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆಸ್ಕರ್‌ನ ಅಂತರರಾಷ್ಟ್ರೀಯ ಕಥಾಚಿತ್ರಗಳ ವಿಭಾಗಕ್ಕೆ ಬ್ರಿಟನ್‌ನ ಅಧಿಕೃತ ಪ್ರವೇಶವಾಗಿತ್ತು,ಈ ವರ್ಷದ ಅತ್ಯುತ್ತಮ ಚೊಚ್ಚಲ ನಿರ್ದೇಶನದ ಚಿತ್ರವಾಗಿ ಬಾಫ್ಟಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ‘ಅಬ್ಸರ್ವರ್’ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಒಳಗೊಂಡಂತೆ ಅತ್ಯುತ್ತಮ ವಿಮರ್ಶೆಗಳಿಗೆ ಪಾತ್ರವಾಗಿತ್ತು. ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿರುವ ಶಹನಾ ಗೋಸ್ವಾಮಿ ಇತ್ತಿಚಿಗೆ ಏಶ್ಯನ್ ಫಿಲ್ಮ್ ಅವಾರ್ಡ್ಸ್‌ಗಳ ಅತ್ತುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಹಿಂದಿ ಭಾಷೆಯ ಈ ಚಿತ್ರವು ಭಾರತದಲ್ಲಿ ನಿರ್ಮಾಣಗೊಂಡಿದ್ದು, ಸಂಪೂರ್ಣವಾಗಿ ಭಾರತೀಯ ತಾರಾಗಣವನ್ನು ಹೊಂದಿದೆ. ನಿರ್ಮಾಪಕರು ಭಾರತದಲ್ಲಿ ಚಿತ್ರೀಕರಣಕ್ಕೆ ಅನುಮತಿಗಾಗಿ ಚಿತ್ರಕಥೆಯನ್ನು ಸಲ್ಲಿಸಿದ್ದಾಗ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಭಾರತದ ಅತ್ಯಂತ ದೊಡ್ಡ ಸರಣಿ ಸಿನೆಮಾ ಸಂಸ್ಥೆಯು ಜನವರಿಯಲ್ಲಿ ಚಿತ್ರದ ವಿತರಣೆಗೂ ಸಜ್ಜಾಗಿತ್ತು.

ಆದರೆ ಭಾರತೀಯ ಚಲನಚಿತ್ರ ಸೆನ್ಸರ್ ಮಂಡಳಿಯು ಪೋಲಿಸರನ್ನು ನಕಾರಾತ್ಮಕವಾಗಿ ಚಿತ್ರಿಸಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿದೆ. ಹೀಗಾಗಿ ಭಾರತೀಯ ಪ್ರೇಕ್ಷಕರು ಇದನ್ನು ಚಿತ್ರಮಂದಿರಗಳಲ್ಲಿ ನೋಡುವ ಸಾಧ್ಯತೆಯಿಲ್ಲ.

ಸಂತೋಷ್ ಚಿತ್ರವು ಪ್ರಸ್ತುತ ಬ್ರಿಟನ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News