ಬಿಡುಗಡೆಗೆ ಮುನ್ನವೇ ದಾಖಲೆ ಸೃಷ್ಟಿಸಿದ ʼಎಂಪುರಾನ್ʼ!

Update: 2025-03-26 22:15 IST
ಬಿಡುಗಡೆಗೆ ಮುನ್ನವೇ ದಾಖಲೆ ಸೃಷ್ಟಿಸಿದ ʼಎಂಪುರಾನ್ʼ!
  • whatsapp icon

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ʼಎಂಪುರಾನ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರದ ಪ್ರೀ ಬುಕ್ಕಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಸಿನಿಮಾ ತೆರೆಗಪ್ಪಳಿಸುವ ಮೊದಲೇ ಚಿತ್ರರಂಗದ ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ.

2019ರಲ್ಲಿ ಮೋಹನ್‌ಲಾಲ್‌ ನಟನೆಯ ಲೂಸಿಫರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಲಯಾಳಂ ಮಾತ್ರವಲ್ಲದೆ ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಮಾಡಲಾಗಿತ್ತು. ಮಾರ್ಚ್ 27ರಂದು ಅದೇ ಸಿನಿಮಾದ ಎರಡನೇ ಭಾಗ ʼಎಂಪುರಾನ್' ಬಿಡುಗಡೆಯಾಗಲಿದೆ. ʼಎಂಪುರಾನ್ʼ ಚಿತ್ರದ ಟ್ರೇಲರ್ ಮಾರ್ಚ್ 20ರಂದು ಬಿಡುಗಡೆಯಾಯಿತು. ಇದೀಗ ಚಿತ್ರವು ಪ್ರಪಂಚದಾದ್ಯಂತ ಸಾಕಷ್ಟು ಸಂಚಲನ ಮೂಡಿಸುತ್ತಿದೆ.

ಆಸ್ಟ್ರೇಲಿಯಾ, ಜರ್ಮನಿ, ಯುಎಸ್, ಯುರೋಪ್, ಯುಕೆ ಮತ್ತು ಐರ್ಲೆಂಡ್ ಸೇರಿದಂತೆ ಪ್ರಪಂಚದಾದ್ಯಂತ ಚಿತ್ರದ ಭರ್ಜರಿ ಪ್ರೀ ಬುಕ್ಕಿಂಗ್ ನಡೆದಿದೆ.

ʼಎಂಪುರಾನ್ʼ ಚಿತ್ರವನ್ನು ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ. ಮುರಳಿ ಗೋಪಿ ಚಿತ್ರ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಲೈಕಾ ಪ್ರೊಡಕ್ಷನ್ಸ್, ಆಶೀರ್ವಾದ್ ಸಿನಿಮಾಸ್, ಶ್ರೀ ಗೋಕುಲಂ ಮೂವೀಸ್ ಸಂಸ್ಥೆಗಳ ಅಡಿಯಲ್ಲಿ ಸುಭಾಸ್ಕರನ್, ಆಂಟನಿ ಪೆರುಂಬಾವೂರ್, ಗೋಕುಲಂ ಗೋಪಾಲನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಮೋಹನ್ ಲಾಲ್ ಕಥಾನಾಯಕನಾಗಿ ಅಭಿನಯಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಇಂದ್ರಜಿತ್ ಸುಕುಮಾರನ್, ಅಭಿಮನ್ಯು ಸಿಂಗ್ ಮತ್ತು ಮಂಜು ವಾರಿಯರ್ ಮುಖ್ಯ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ಜೆರೋಮ್ ಫ್ಲಿನ್, ಆಂಡ್ರಿಯಾ ತಿವಾದರ್, ಸೂರಜ್, ಸಾನಿಯಾ ಅಯ್ಯಪ್ಪನ್, ಸಾಯಿಕುಮಾರ್, ಬೈಜು ಸಂತೋಷ್, ಫಾಝಿಲ್, ಸಚಿನ್ ಖೇಡೇಕರ್, ನೈಲಾ ಉಷಾ, ಗಿಜು ಜಾನ್, ನಂದು, ಶಿವಾಜಿ ಗುರುವಾಯೂರ್, ಎಸ್ ಮಣಿಕುಟ್ಟನ್, ಕಾರ್ತಿಕೇಯ ದೇವ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಎಂಪುರಾನ್ ಸಿನಿಮಾ ಫ್ರೀ ಬುಕ್ಕಿಂಗ್ ಕಲೆಕ್ಷನ್ ಕೂಡಾ ಮಸ್ತ್ ಆಗಿದೆ. ಬಿಡುಗಡೆಯ ಮೊದಲ ದಿನವೇ 50 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಆನ್‌ಲೈನ್‌ ಟಿಕೆಟ್ ಪ್ಲ್ಯಾಟ್‌ಫಾರ್ಮ್‌ ಬುಕ್ ಮೈಶೋನಲ್ಲಿ 10 ಲಕ್ಷ ಮುಂಗಡ ಟಿಕೆಟ್ ಮಾರಾಟವಾಗಿದೆ. ಮೊದಲ 24 ಗಂಟೆಗಳಲ್ಲಿ BookMyShow ಅಪ್ಲಿಕೇಶನ್ ಮೂಲಕ ಭಾರತದಲ್ಲಿ 6.45 ಲಕ್ಷ ಮುಂಗಡ ಟಿಕೆಟ್‌ಗಳು ಮಾರಾಟವಾಗಿದೆ.

ಎಂಪುರಾನ್ ಈವರೆಗೆ ಅತಿ ಹೆಚ್ಚು ಅಡ್ವಾನ್ಸ್ ಬುಕಿಂಗ್ ಪಡೆದ ಚಿತ್ರ ಎಂದು ಎಣಿಸಿಕೊಂಡಿದೆ. ಮುಂಗಡ ಬುಕಿಂಗ್‌ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼಆಡುಜೀವಿತಮ್: ದಿ ಗೋಟ್ ಲೈಫ್ʼ ಅನ್ನು ಹಿಂದಿಕ್ಕಿದೆ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಪ್ರೀ ಬುಕ್ಕಿಂಗ್ ದಾಖಲೆಗಳನ್ನು ಚಿತ್ರವು ಪುಡಿಗಟ್ಟಿದೆ.

ಕರ್ನಾಟಕದಲ್ಲೂ ಸಿನಿಮಾ ರಿಲೀಸ್ :

ಕರ್ನಾಟಕದಲ್ಲೂ ಈ ಸಿನಿಮಾ ರಿಲೀಸ್ ಆಗಲಿದ್ದು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಈ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ. ಕರ್ನಾಟಕದಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಚಿತ್ರದ ತಮಿಳುನಾಡು ವಿತರಣಾ ಹಕ್ಕನ್ನು ಶ್ರೀಗೋಕುಲಂ ಗೋಪಾಲನ್ ಅವರ ಶ್ರೀ ಗೋಕುಲಂ ಮೂವೀಸ್ ಪಡೆದುಕೊಂಡಿದೆ.

ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದ ಮಮ್ಮುಟ್ಟಿ :

ʼಎಂಪುರಾನ್' ಪ್ರೀ ಬುಕ್ಕಿಂಗ್ ಭರ್ಜರಿಯಾಗಿ ನಡೆಯುತ್ತಿದ್ದಂತೆ ಸೂಪರ್ ಸ್ಟಾರ್ ಮಮ್ಮುಟ್ಟಿ ಚಿತ್ರ ತಂಡಕ್ಕೆ ಶುಭಾಶಯವನ್ನು ಕೋರಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮಮ್ಮುಟ್ಟಿ ʼಐತಿಹಾಸಿಕ ವಿಜಯಕ್ಕಾಗಿ ಎಂಪುರಾನ್‌ನ ಸಂಪೂರ್ಣ ತಂಡಕ್ಕೆ ಶುಭಾಶಯಗಳು. ಇದು ಪ್ರಪಂಚದಾದ್ಯಂತ ದಾಖಲೆಗಳನ್ನು ಮುರಿಯುತ್ತದೆ. ಇಡೀ ಮಲಯಾಳಂ ಚಿತ್ರರಂಗಕ್ಕೆ ಹೆಮ್ಮೆ ತರುತ್ತದೆ, ಲಾಲ್ ( ಮೋಹನ್ ಲಾಲ್ ) ಹಾಗೂ ಪ್ರಥ್ವಿ ರಾಜ್ ಗೆ ಶುಭಾಶಯ ಎಂದು ಹೇಳಿದ್ದಾರೆ. ಇದಕ್ಕೆ ಅಷ್ಟೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಮೋಹನ್ ಲಾಲ್ ನನ್ನ ಸೋದರನಿಂದಲೇ ಬಂದಿರುವ ಈ ಪ್ರತಿಕ್ರಿಯೆ ಮೌಲ್ಯ ಕಟ್ಟಲಾಗದ್ದು ಎಂದು ಬಣ್ಣಿಸಿ ಮಮ್ಮುಟ್ಟಿಗೆ ಧನ್ಯವಾದ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News