ಲಾರೆನ್ಸ್ ಬಿಷ್ಣೋಯಿಯಿಂದ ಜೀವ ಬೆದರಿಕೆ; ಕೊನೆಗೂ ಮೌನ ಮುರಿದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ (Photo: PTI)
ಮುಂಬೈ: ‘ಎಲ್ಲವೂ ಭಗವಂತ ಹಾಗೂ ಸೃಷ್ಟಿಕರ್ತನ ಕೈಯಲ್ಲಿದೆ. ಎಷ್ಟು ಆಯಸ್ಸನ್ನು ಬರೆಯಬೇಕೊ, ಅಷ್ಟೇ ಆಯಸ್ಸನ್ನು ಬರೆಯಲಾಗಿದೆ. ಅಷ್ಟೇ ಸಾಕು” ಎಂದು ತಮಗೆ ನಿರಂತರವಾಗಿ ಬರುತ್ತಿರುವ ಜೀವ ಬೆದರಿಕೆಗಳ ಕುರಿತು ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಮುಂದಿನ ‘ಸಿಕಂದರ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ 59 ವರ್ಷದ ಸಲ್ಮಾನ್ ಖಾನ್, ಜೀವ ಬೆದರಿಕೆ ಹಾಗೂ ತಮ್ಮ ಮುಂಬೈ ಅಪಾರ್ಟ್ ಮೆಂಟ್ ಮೇಲೆ ನಡೆದ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ತಮಗೆ ಒದಗಿಸಲಾಗಿರುವ ಬಿಗಿ ಭದ್ರತೆಯಿಂದ ಸವಾಲುಗಳು ಎದುರಾಗಿವೆ ಎಂಬುದನ್ನು ಒಪ್ಪಿಕೊಂಡರು.
ಬಿಗಿ ಭದ್ರತೆ ಹಾಗೂ ಕ್ಯಾಮೆರಾಗಳಿಲ್ಲದೆ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಕೆಲವೊಮ್ಮೆ ಹಲವಾರು ಜನರೊಂದಿಗೆ ತಿರುಗಾಡುವುದು ಸಮಸ್ಯೆಯಾಗಿ ಪರಿಣಮಿಸಿದೆ” ಎಂದರು.
ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ನಟ ಸಲ್ಮಾನ್ ಖಾನ್ ವಾಸಿಸುತ್ತಿರುವ ಮುಂಬೈನ ಬಾಂದ್ರಾದಲ್ಲಿರುವ ಗೆಲಾಕ್ಸಿ ಅಪಾರ್ಟ್ ಮೆಂಟ್ ಮೇಲೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಗುಂಡಿನ ದಾಳಿಯನ್ನು ನಟ ಸಲ್ಮಾನ್ ಖಾನ್ ರನ್ನು ಬೆದರಿಸಲು ಮಾಡಲಾಗಿತ್ತು ಹಾಗೂ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸೂಚನೆಯ ಮೇರೆಗೆ ನಡೆಸಲಾಗಿತ್ತು ಎಂಬುದು ತನಿಖೆಯ ವೇಳೆ ಬಯಲಾಗಿತ್ತು.
ಸದ್ಯ ಗುಜರಾತ್ ನ ಬಂದೀಖಾನೆಯಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ, 1998ರಲ್ಲಿ ನಡೆದಿದ್ದ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಸಲ್ಮಾನ್ ಖಾನ್ ವಿರುದ್ಧ ಹಗೆ ಸಾಧಿಸುತ್ತಲೇ ಬಂದಿದ್ದಾನೆ.