ʼಎಂಪುರಾನ್ʼ ಚಿತ್ರದಿಂದ ಕೇಂದ್ರ ಸಚಿವ ಸುರೇಶ್ ಗೋಪಿ ಹೆಸರನ್ನು ತೆಗೆದು ಹಾಕಿದ ಚಿತ್ರ ತಂಡ!

Photo credit: X
ತಿರುವನಂತಪುರ : ಬಲಪಂಥೀಯರ ವಿರೋಧದ ಬಳಿಕ ಮೋಹನ್ ಲಾಲ್ ನಟನೆಯ ಎಂಪುರಾನ್ ಚಿತ್ರದ 24 ದೃಶ್ಯಗಳನ್ನು ಕತ್ತರಿಸಲಾಗಿದೆ. ಚಿತ್ರದ ಪರಿಷ್ಕೃತ ಆವೃತಿಯಲ್ಲಿ ʼವಿಶೇಷ ಅಭಿನಂದನೆʼ ವಿಭಾಗದಿಂದ ಕೇಂದ್ರ ಸಚಿವ, ನಟ ಸುರೇಶ್ ಗೋಪಿ ಅವರ ಹೆಸರನ್ನು ತೆಗೆದು ಹಾಕಲಾಗಿದೆ.
ಮಾರ್ಚ್ 27ರಂದು ಎಂಪುರಾನ್ ಚಲನಚಿತ್ರ ಬಿಡುಗಡೆಯಾಯ್ತು. ಚಿತ್ರದಲ್ಲಿ ಗುಜರಾತ್ ಗಲಭೆ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಬಲಪಂಥೀಯರು ಟೀಕಿಸಿದ್ದರು. ಇದರ ಬೆನ್ನಲ್ಲೇ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರ ತಂಡವು ತೀರ್ಮಾನಿಸಿತ್ತು. ಅದರಂತೆ ಚಿತ್ರದ 24 ದೃಶ್ಯಗಳನ್ನು ಅಂದರೆ ಒಟ್ಟು 2 ನಿಮಿಷ ಮತ್ತು 8 ಸೆಕೆಂಡುಗಳ ದೃಶ್ಯವನ್ನು ಕತ್ತರಿಸಲಾಗಿದೆ.
ಚಿತ್ರದ ಪರಿಷ್ಕೃತ ಆವೃತ್ತಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ಅನುಮೋದನೆ ನೀಡಿದೆ. ಚಿತ್ರದಲ್ಲಿನ ಕೆಲ ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ. ಬಲಪಂಥೀಯರ ಆಕ್ರೋಶಕ್ಕೆ ಕಾರಣವಾದ ಕೆಲವೊಂದು ದೃಶ್ಯಗಳನ್ನು ಕೂಡ ತೆಗೆದು ಹಾಕಲಾಗಿದೆ. ಇದಲ್ಲದೆ ವಿಶೇಷ ಅಭಿನಂದನೆಗಳ ವಿಭಾಗದಿಂದ ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಹೆಸರನ್ನು ಕೂಡ ತೆಗೆದು ಹಾಕಲಾಗಿದೆ. ಸುರೇಶ್ ಗೋಪಿ ಅವರ ಹೆಸರನ್ನು ಯಾವ ಕಾರಣಕ್ಕೆ ತೆಗೆದು ಹಾಕಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.