ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ನನ್ನ ಮೂತ್ರ ಕುಡಿದಿದ್ದೆ: ಪರೇಶ್ ರಾವಲ್

Update: 2025-04-28 13:18 IST
ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ನನ್ನ ಮೂತ್ರ ಕುಡಿದಿದ್ದೆ: ಪರೇಶ್ ರಾವಲ್

ಪರೇಶ್ ರಾವಲ್ (Photo: PTI)

  • whatsapp icon

ಮುಂಬೈ: “ರಾಜ್ ಕುಮಾರ್ ಸಂತೋಷಿ ನಿರ್ದೇಶನದ ‘ಘಾತಕ್’ ಚಿತ್ರದ ಚಿತ್ರೀಕರಣದ ವೇಳೆ ನನ್ನ ಮೊಣಕಾಲಿಗೆ ಆಗಿದ್ದ ಗಂಭೀರ ಸ್ವರೂಪದ ಗಾಯದಿಂದ ಚೇತರಿಸಿಕೊಳ್ಳಲು ನಾನು ನನ್ನ ಮೂತ್ರ ಕುಡಿದಿದ್ದೆ. ನಾನು ಅದರಿಂದ ಚೇತರಿಸಿಕೊಂಡ ವೇಗವವನ್ನು ಕಂಡ ಸ್ವತಃ ವೈದ್ಯರೇ ದಂಗಾಗಿದ್ದರು” ಎಂದು ಬಾಲಿವುಡ್ ನಟ ಪರೇಶ್ ರಾವಲ್ ಬಹಿರಂಗ ಪಡಿಸಿದ್ದಾರೆ.

ರಾಜ್ ಕುಮಾರ್ ಸಂತೋಷಿ ನಿರ್ದೇಶನದ ‘ಘಾತಕ್’ ಚಿತ್ರದ ಚಿತ್ರೀಕರಣದ ವೇಳೆ ರಾಕೇಶ್ ಪಾಂಡೆಯೊಂದಿಗೆ ದೃಶ್ಯವೊಂದರಲ್ಲಿ ನಟಿಸುವಾಗ ಪರೇಶ್ ರಾವಲ್ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಟೀನು ಆನಂದ್ ಹಾಗೂ ಡ್ಯಾನಿ ಡೆನ್ಝೊಂಗ್ಪಾ ಮುಂಬೈನ ನಾನಾವತಿ ಆಸ್ಪತ್ರೆಗೆ ಸಾಗಿಸಿದ್ದರು.

ಈ ಘಟನೆಯನ್ನು ಮೆಲುಕು ಹಾಕಿರುವ ಪರೇಶ್ ರಾವಲ್, ಅದು ತುಂಬಾ ಭಯಾನಕವಾಗಿತ್ತು. ಅದರಿಂದ ನನ್ನ ವೃತ್ತಿ ಜೀವನ ಮುಗಿದೇ ಹೋಯಿತು ಎಂದು ನಾನು ಭಾವಿಸಿದ್ದೆ ಎಂದು ಹೇಳಿದ್ದಾರೆ.

Lallantop ಯೂಟ್ಯೂಬ್ ವಾಹಿನಿಯೊಂದಿಗೆ ಮಾತನಾಡಿರುವ ಅವರು, ನಾನು ಆಸ್ಪತ್ರೆಗೆ ದಾಖಲಾಗಿದ್ದಾಗ, ಅಲ್ಲಿಗೆ ಭೇಟಿ ನೀಡಿದ ಸಾಹಸ ನಿರ್ದೇಶಕ ದಿ. ವೀರು ದೇವಗನ್, “ಸ್ವಮೂತ್ರಪಾನ ಮಾಡು” ಎಂಬ ವಿಶಿಷ್ಟ ಸಲಹೆ ನೀಡಿದ್ದರು. ನಾನು ನನ್ನ ಗಾಯದ ಕುರಿತು ಅವರಿಗೆ ತಿಳಿಸಿದಾಗ, “ಬೆಳಗಾಗುತ್ತಿದ್ದಂತೆಯೆ ಸ್ವಮೂತ್ರಪಾನ ಮಾಡು. ಎಲ್ಲ ಸಾಹಸ ಕಲಾವಿದರೂ ಇದನ್ನು ಮಾಡುತ್ತಾರೆ” ಎಂದು ಅವರು ನನಗೆ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.

“ಅದರಿಂದ ನೀನು ಬೇಗ ಚೇತರಿಸಿಕೊಳ್ಳುತ್ತೀಯ” ಎಂದು ನನಗೆ ಧೈರ್ಯ ತುಂಬಿದ್ದ ಅವರು, ಮದ್ಯ, ತಂಬಾಕು ಹಾಗೂ ಮಾಂಸಾಹಾರವನ್ನು ತ್ಯಜಿಸಿ, ನಿಯಮಿತ ಆಹಾರಕ್ಕೆ ಮಾತ್ರ ಅಂಟಿಕೊಳ್ಳುವಂತೆಯೂ ಕಿವಿಮಾತು ಹೇಳಿದ್ದರು ಎಂದು ಪರೇಶ್ ರಾವಲ್ ಹೇಳಿದ್ದಾರೆ.

ಸ್ವಮೂತ್ರಪಾನವನ್ನು ಕ್ಷಿಪ್ರವಾಗಿ ಮಾಡಲಾಗಲಿಲ್ಲ ಎಂದೂ ಒಪ್ಪಿಕೊಂಡಿರುವ ಅವರು, ನಾನದನ್ನು ಧರ್ಮಾಚರಣೆಯಂತೆ ಭಾವಿಸಿದೆ ಎಂದು ಹೇಳಿದ್ದಾರೆ. “ನಾನೇನಾದರೂ ಸ್ವಮೂತ್ರಪಾನ ಮಾಡುವುದಾದರೆ, ನಾನದನ್ನು ಬಿಯರ್ ಅನ್ನು ಗುಟುಕರಿಸುವಂತೆ ಗುಟುಕರಿಸಬೇಕು ಎಂದು ಮುಂಚಿತವಾಗಿಯೇ ನಿರ್ಧರಿಸಿದ್ದೆ” ಎಂದೂ ಅವರು ತಿಳಿಸಿದ್ದಾರೆ. ವೀರ್ ದೇವಗನ್ ರ ಈ ಸಲಹೆಯನ್ನು 15 ದಿನಗಳ ಕಾಲ ಪಾಲಿಸಿದ ನಂತರ, ನನ್ನ ಕಾಲಿನ ಹೊಸ ಎಕ್ಸ್-ರೇಯನ್ನು ತೆಗೆಯಲಾಯಿತು. ಅದನ್ನು ನೋಡಿ ಸ್ವತಃ ವೈದ್ಯರೇ ದಂಗಾಗಿಬಿಟ್ಟರು. ಅದರಲ್ಲಿ ಬಿಳಿ ಗೆರೆ ಇದ್ದು, ನನ್ನ ಕಾಲಿನ ಮೂಳೆ ಗುಣವಾಗುತ್ತಿರುವುದನ್ನು ತೋರಿಸುತ್ತಿತ್ತು ಎಂದೂ ಅವರು ಹೇಳಿದ್ದಾರೆ.

ಬಾಲಿವುಡ್ ನ ಪ್ರಸಿದ್ಧ ಹಾಸ್ಯ ನಟರಾದ ಪರೇಶ್ ರಾವಲ್, ಬಿಜೆಪಿಯ ಬೆಂಬಲಿಗರೂ ಆಗಿರುವುದರಿಂದ, ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News