ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ಮೋಹನ್ ಲಾಲ್ ರ ʼಎಂಪುರಾನ್ʼ: ಗುಜರಾತ್ ಗಲಭೆ ಕುರಿತ ಚಿತ್ರಣಕ್ಕೆ ಅಸಮಾಧಾನ

Photo credit: X/Mpoh
ಹೊಸದಿಲ್ಲಿ: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ಪೃಥ್ವಿರಾಜ್ ಸುಕುಮಾರನ್ ಅವರ ನಿರ್ದೇಶನದ ʼಎಂಪುರಾನ್ʼ ಚಲನಚಿತ್ರದಲ್ಲಿ 2002ರ ಗುಜರಾತ್ ಗಲಭೆಯನ್ನು ಸ್ಪಷ್ಟವಾಗಿ ಹೋಲುವ ದೃಶ್ಯಗಳಿವೆ ಎಂದು ಬಲಪಂಥೀಯ ಮತ್ತು ಸಂಘಪರಿವಾರದ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ.
ಮೋಹನ್‌ಲಾಲ್ ಅಭಿಮಾನಿಗಳಾಗಿರುವ ಕೆಲ ಬಲಪಂಥೀಯರು ʼಎಂಪುರಾನ್ʼ ಚಲನಚಿತ್ರ ಮತ್ತು ಚಿತ್ರದಲ್ಲಿ ನಟಿಸಿದ ಮೋಹನ್ ಲಾಲ್, ನಿರ್ದೇಶನ ಮಾಡಿದ ಪೃಥ್ವಿರಾಜ್, ಚಿತ್ರ ಕಥೆ ಬರೆದ ಮುರಳಿ ಗೋಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನಟ ಪೃಥ್ವಿರಾಜ್ ಸುಕುಮಾರನ್ 2019ರಲ್ಲಿ ಲೂಸಿಫರ್ ಮೂಲಕ ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಇದಾದ 6 ವರ್ಷಗಳ ಬಳಿಕ ಲೂಸಿಫರ್ ಮುಂದುವರಿದ ಭಾಗ ʼಎಂಪುರಾನ್ ʼ ಚಿತ್ರ ತೆರೆಯ ಮೇಲೆ ಬಂದಿದೆ. ಮುರಳಿ ಗೋಪಿ ಚಿತ್ರ ಕಥೆ ಬರೆದಿದ್ದು, ಮಂಜು ವಾರಿಯರ್, ಟೊವಿನೋ ಥಾಮಸ್, ಇಂದ್ರಜಿತ್ ಸುಕುಮಾರನ್ ಸೇರಿದಂತೆ ಹೆಸರಾಂತ ನಟರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ʼಎಂಪುರಾನ್ʼ ಚಿತ್ರ ಬಿಡುಗಡೆಗೆ ಮೊದಲು ಪ್ರೀ ಬುಕ್ಕಿಂಗ್‌ನಲ್ಲಿ ಇತಿಹಾಸ ನಿರ್ಮಿಸಿತ್ತು, ಚಿತ್ರ ಬಿಡುಗಡೆ ಬಳಿಕ ಚಿತ್ರವು ಚರ್ಚೆಗೆ ಗ್ರಾಸವಾಗಿದೆ. ಗೋಧ್ರಾ ಹಿಂಸಾಚಾರ, ಜಾತ್ಯತೀತ ಪಕ್ಷವನ್ನು ತೊರೆದು ಹಿಂದುತ್ವದ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪಾತ್ರವನ್ನು ಸಂಪೂರ್ಣವಾಗಿ ಋಣಾತ್ಮಕವಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿ ಅಭಿಜಿತ್ ರಾಧಾಕೃಷ್ಣನ್ ನಾಯರ್ ಎಂಬವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಚಿತ್ರದಲ್ಲಿ ಹಿಂದೂಗಳನ್ನು ಮತ್ತು ದೇಶವನ್ನು ಆಳುವ ಬಿಜೆಪಿಯ ಪ್ರಮುಖ ನಾಯಕ ನರೇಂದ್ರ ಮೋದಿಯವರನ್ನು ನಿಂದನೆ ಮಾಡಲಾಗಿದೆ" ಎಂದು ಹೇಳಿದ್ದಾರೆ. ಅಲ್ಲದೇ ಅಭಿಜಿತ್, ಮೋಹನ್‌ಲಾಲ್ ಅವರಿಗೆ ಈ ಪೋಸ್ಟ್ ಟ್ಯಾಗ್ ಮಾಡಿದ್ದಾರೆ.
ನನ್ನ ಪ್ರೀತಿಯ ನಟ ಇಂತಹ ಚಿತ್ರದಲ್ಲಿ ಹೇಗೆ ನಟಿಸುತ್ತಾರೆ. ಮುಂದಕ್ಕೆ ನಾನು ಮೋಹನ್ ಲಾಲ್ ಅವರ ಚಲನ ಚಿತ್ರ ವೀಕ್ಷಿಸುವುದಿಲ್ಲ ಎಂದು ಅಭಿಜಿತ್ ಪ್ರತಿಜ್ಞೆ ಮಾಡಿದ್ದಾರೆ.
ಅವರ ಈ ಪೋಸ್ಟ್ ಗೆ ಹಲವು ಬಲಪಂಥೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ ಈ ಪೋಸ್ಟ್ ಅನ್ನು ಪ್ರಧಾನ ಮಂತ್ರಿ, ಗೃಹ ಸಚಿವರ ಕಚೇರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಮೋಹನ್‌ಲಾಲ್ ಅವರು ಭಾರತದ ಉನ್ನತ ತನಿಖಾ ಸಂಸ್ಥೆಗಳನ್ನು ದೂಷಿಸುವ ಪ್ರಚಾರ ಚಿತ್ರದಲ್ಲಿ ನಟಿಸಿದ್ದಾರೆ ಮತ್ತು ಗೃಹ ಸಚಿವರನ್ನು ಗಲಭೆಕೋರ ಎಂದು ಬಿಂಬಿಸಿದ್ದಾರೆ ಎಂದು ಬಲಪಂಥೀಯರು ದೂರಿದ್ದಾರೆ.
ಮೋಹನ್ ಲಾಲ್ ಕೃತಜ್ಞತೆಯಿಲ್ಲದ ವ್ಯಕ್ತಿ, ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪದವಿ ಪಡೆದ ಬಳಿಕವೂ ಅವರು ಕೃತಜ್ಞತೆಯಿಲ್ಲದ ರೀತಿ ನಡೆದುಕೊಂಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಆದರೆ ಮೋಹನ್‌ಲಾಲ್ ಅವರಿಗೆ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಪದವಿ 2009ರಲ್ಲಿ ನೀಡಲಾಗಿದೆ. ಆ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲ.
ಎಂಪುರಾನ್ ಚಿತ್ರಕ್ಕೆ ಶುಭ ಹಾರೈಸಿದ ಬಿಜೆಪಿಯ ನೂತನ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಪೋಸ್ಟ್‌ಗೆ ಇದೇ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಚಿತ್ರ ಬಿಡುಗಡೆಯ ದಿನವಾದ ಮಾರ್ಚ್ 27ರ ಬೆಳಿಗ್ಗೆ ಪೋಸ್ಟ್ ಮಾಡಿದ್ದ ರಾಜೀವ್ ಚಂದ್ರಶೇಖರ್, ಚಿತ್ರವನ್ನು ನೋಡಿ ಆನಂದಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಕೆಲವೇ ಗಂಟೆಗಳಲ್ಲಿ ಸಾವಿರಾರು ಕಾಮೆಂಟ್‌ಗಳು ಬಂದಿದೆ. ಕೆಲವರು ಬಿಜೆಪಿ ವಿರೋಧಿ ಚಲನಚಿತ್ರವಾದರೂ ಶುಭ ಹಾರೈಸಿದ್ದಕ್ಕೆ ರಾಜೀವ್ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು. "ನೀವು ಬೆಂಗಳೂರಿಗೆ ವಾಪಾಸ್ಸು ಹೋಗಿ, ಕೇರಳಕ್ಕೆ ಬರಬೇಡಿ" ಎಂದು ರಾಜೀವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಅವರ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಿ ಹೆಚ್ಚಿನವು ಸಕಾರಾತ್ಮಕವಾಗಿವೆ. ಕೆಲವರು ಅಭಿಜಿತ್ ಪೋಸ್ಟ್ ಮಾಡಿದ ಶೈಲಿಯಲ್ಲೇ ಪೋಸ್ಟ್ ಮಾಡಿ ಚಿತ್ರವನ್ನು ಟೀಕಿಸಿದ್ದಾರೆ.