ಅಭಿಮಾನಿಗಳಿಗೆ ಉಂಟಾದ ನೋವಿಗೆ ವಿಷಾದಿಸುತ್ತೇನೆ : ಎಂಪುರಾನ್ ವಿವಾದದ ಬೆನ್ನಲ್ಲೇ ಕ್ಷಮೆಯಾಚಿಸಿದ ಮೋಹನ್ ಲಾಲ್

Photo | NDTV
ತಿರುವನಂತಪುರಂ : ಎಂಪುರಾನ್ ಚಿತ್ರದಲ್ಲಿ ಗುಜರಾತ್ ಗಲಭೆ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ವಿವಾದ ಭುಗಿಲೆದ್ದ ಬೆನ್ನಲ್ಲೇ ನಟ ಮೋಹನ್ ಲಾಲ್ ಅವರು ಕ್ಷಮೆಯಾಚಿಸಿದ್ದು, ಪ್ರೀತಿಯ ಅಭಿಮಾನಿಗಳಿಗೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಹೇಳಿದರು.
ಎಂಪುರಾನ್ ಚಿತ್ರ ನಿರ್ಮಾಣ ತಂಡವು ಚಿತ್ರದಲ್ಲಿನ ಕೆಲವು ದೃಶ್ಯಗಳನ್ನು ತೆಗೆದು ಹಾಕಲು ನಿರ್ಧರಿಸಿದೆ ಎಂದು ಮೋಹನ್ ಲಾಲ್ ಹೇಳಿದ್ದು, ಪೋಸ್ಟ್‌ನ್ನು ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ʼಲೂಸಿಫರ್ ಚಿತ್ರದ ಎರಡನೇ ಭಾಗವಾದ 'ಎಂಪುರಾನ್'ನಲ್ಲಿ ಕೆಲವು ರಾಜಕೀಯ-ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟುಮಾಡಿದೆ ಎಂದು ನಾನು ಅರಿತಿದ್ದೇನೆ. ಕಲಾವಿದನಾಗಿ, ನನ್ನ ಯಾವುದೇ ಚಲನಚಿತ್ರಗಳು ಯಾವುದೇ ರಾಜಕೀಯ ಚಳುವಳಿ, ಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷವನ್ನು ಹೊಂದದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದ್ದರಿಂದ, ನಾನು ಮತ್ತು ಎಂಪುರಾನ್ ತಂಡ ನನ್ನ ಪ್ರೀತಿಪಾತ್ರರಿಗೆ ಉಂಟಾದ ಮಾನಸಿಕ ನೋವಿಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಚಿತ್ರದ ಹಿಂದೆ ಕೆಲಸ ಮಾಡಿದ ನಾವೆಲ್ಲರೂ ಜವಾಬ್ದಾರರು ಎಂದು ಅರಿತುಕೊಂಡು ನಾವು ಒಟ್ಟಾಗಿ ಅಂತಹ ದೃಶ್ಯಗಳನ್ನು ಚಲನಚಿತ್ರದಿಂದ ತೆಗೆದುಹಾಕಲು ನಿರ್ಧರಿಸಿದ್ದೇವೆ. ಕಳೆದ ನಾಲ್ಕು ದಶಕಗಳಿಂದ ಸಿನಿಮಾ ಜೀವನವನ್ನು ನಡೆಸಿದ್ದೇನೆ. ನಿಮ್ಮ ಪ್ರೀತಿ ಮತ್ತು ನಂಬಿಕೆ ನನ್ನ ಏಕೈಕ ಶಕ್ತಿ. ಮೋಹನ್ ಲಾಲ್ ಅದಕ್ಕಿಂತ ದೊಡ್ಡವನಲ್ಲ ಎಂದು ನಾನು ನಂಬುತ್ತೇನೆʼ ಎಂದು ಮೋಹನ್‌ಲಾಲ್ ಪೋಸ್ಟ್‌ನಲ್ಲಿ ಹೇಳಿದರು.
ಇದಕ್ಕೂ ಮೊದಲು ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಮಾತನಾಡಿ, ಚಿತ್ರ ನಿರ್ಮಾಣ ತಂಡವು ಚಿತ್ರದಲ್ಲಿನ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ ಎಂದು ಹೇಳಿದರು.