ಗುಜರಾತ್ ಗಲಭೆ ಕುರಿತು ಉಲ್ಲೇಖ : ಬಲಪಂಥೀಯರ ವಿರೋಧದ ಬೆನ್ನಲ್ಲೇ ಎಂಪುರಾನ್ ಚಿತ್ರದ 17 ದೃಶ್ಯಗಳಿಗೆ ಕತ್ತರಿ!

Update: 2025-03-30 11:18 IST
ಗುಜರಾತ್ ಗಲಭೆ ಕುರಿತು ಉಲ್ಲೇಖ : ಬಲಪಂಥೀಯರ ವಿರೋಧದ ಬೆನ್ನಲ್ಲೇ ಎಂಪುರಾನ್ ಚಿತ್ರದ 17 ದೃಶ್ಯಗಳಿಗೆ ಕತ್ತರಿ!

Photo | NDTV

  • whatsapp icon

ತಿರುವನಂತಪುರಂ: 2002ರ ಗುಜರಾತ್ ಗಲಭೆಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಬಲಪಂಥೀಯರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಎಂಪುರಾನ್ ಚಲನ ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಎಂಪುರಾನ್ ಚಿತ್ರದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳನ್ನು ಕತ್ತರಿಸಲಾಗುವುದು, ಬಾಬಾ ಬಜರಂಗಿ ಹೆಸರನ್ನು ಬದಲಾಯಿಸಲಾಗುವುದು ಮತ್ತು ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗುವುದು ಎಂದು ಚಿತ್ರ ತಂಡವು ತಿಳಿಸಿದೆ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮೋಹನ್ ಲಾಲ್ ಅಭಿನಯದ ಚಿತ್ರಕ್ಕೆ 17 ಬದಲಾವಣೆಗಳನ್ನು ಆದೇಶಿಸಿದೆ. ಪೃಥ್ವಿರಾಜ್ ಸುಕುಮಾರನ್ ಅವರ ನಿರ್ದೇಶನದ ಎಂಪುರಾನ್ ಚಿತ್ರವು ಮಾರ್ಚ್ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ.

ಕೇರಳದ CBFC ಕಚೇರಿಯು ಚಿತ್ರವನ್ನು ಪರಿಶೀಲಿಸಿದೆ ಮತ್ತು ಚಿತ್ರವನ್ನು ಸಂಪಾದನೆ ಮಾಡುವಂತೆ ಚಿತ್ರ ತಂಡಕ್ಕೆ ಸೂಚಿಸಿದೆ. ಪರಿಷ್ಕೃತ ಆವೃತ್ತಿಯನ್ನು ಸೋಮವಾರದೊಳಗೆ ಸಲ್ಲಿಸುವ ನಿರೀಕ್ಷೆಯಿದೆ.

ಚಿತ್ರ ನಿರ್ಮಾಪಕ ಗೋಕುಲಂ ಗೋಪಾಲನ್ ಮಾತನಾಡುತ್ತಾ, ಸಿನಿಮಾದಲ್ಲಿನ ಯಾವುದೇ ದೃಶ್ಯಗಳು ಅಥವಾ ಸಂಭಾಷಣೆಗಳು ಯಾರಿಗಾದರೂ ನೋವುಂಟುಮಾಡಿದ್ದರೆ ಬದಲಾವಣೆಗಳನ್ನು ಮಾಡುವಂತೆ ಚಿತ್ರದ ನಿರ್ದೇಶಕ ಪೃಥ್ವಿರಾಜ್ ಅವರು ಸೂಚಿಸಿದ್ದಾರೆ ಎಂದು ಹೇಳಿದರು.

ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ʼಎಂಪುರಾನ್ ʼ ಚಲನಚಿತ್ರ ಮಾರ್ಚ್ 27ರಂದು ಬಿಡುಗಡೆಯಾಗಿದೆ. ಮುರಳಿ ಗೋಪಿ ಚಿತ್ರ ಕಥೆ ಬರೆದಿದ್ದು, ಮಂಜು ವಾರಿಯರ್, ಟೊವಿನೋ ಥಾಮಸ್, ಇಂದ್ರಜಿತ್ ಸುಕುಮಾರನ್ ಸೇರಿದಂತೆ ಹೆಸರಾಂತ ನಟರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವು ಕೇವಲ ಎರಡು ದಿನಗಳಲ್ಲಿ ಜಾಗತಿಕವಾಗಿ 100 ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News