ಸಲ್ಮಾನ್ ಅಭಿನಯದ ʼಸಿಕಂದರ್ʼ ಗಳಿಕೆಯಲ್ಲಿ ಅನಿರೀಕ್ಷಿತ ಕುಸಿತ

PC: x.com/Showbiz_IT
ಮುಂಬೈ: ಸಲ್ಮಾನ್ ಖಾನ್ ಅಭಿನಯದ ಆ್ಯಕ್ಷನ್ ಚಿತ್ರ ಸಿಕಂದರ್ ಗಳಿಕೆ ಚಿತ್ರ ಬಿಡುಗಡೆಯಾದ ಐದನೇ ದಿನ ಗಣನೀಯ ಕುಸಿತ ಕಂಡಿದ್ದು, ಉದ್ಯಮದ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಐದನೇ ದಿನವಾದ ಗುರುವಾರ ಚಿತ್ರದ ದೇಶೀಯ ಗಳಿಕೆ 5.75 ಕೋಟಿಗೆ ಇಳಿಕೆಯಾಗಿದೆ.
ಈದ್ ಹಬ್ಬದ ಮುನ್ನಾ ದಿನವಾದ ಭಾನುವಾರ ಬಿಡುಗಡೆಯಾದ ಸಿಕಂದರ್ ಆರಂಭದ ದಿನ 26 ಕೋಟಿ ರೂಪಾಯಿಗಳನ್ನು ಗಳಿಸಿಕೊಂಡು ಭಾರಿ ನಿರೀಕ್ಷೆ ಮೂಡಿಸಿತ್ತು. ಈದ್ ಹಬ್ಬದ ದಿನ ಚಿತ್ರದ ಗಳಿಕೆ 29 ಕೋಟಿ ರೂಪಾಯಿಯನ್ನು ತಲುಪಿತ್ತು. ಆದರೆ ಮುಂದಿನ ದಿನಗಳಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಸಿಕಂದರ್ ಚಿತ್ರ ಮಂಗಳವಾರ 19.5 ಕೋಟಿ ರೂಪಾಯಿ ಗಳಿಸಿದರೆ, ಬುಧವಾರ 9.75 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಗುರುವಾರ ಇದುವರೆಗಿನ ಕನಿಷ್ಠ ಗಳಿಕೆಯನ್ನು ದಾಖಲಿಸಿದ್ದು, ಇದುವರೆಗೆ ಚಿತ್ರದ ಒಟ್ಟು ಗಳಿಕೆ 90 ಕೋಟಿ ರೂಪಾಯಿ ಆಗಿದೆ ಎಂದು ಚಿತ್ರೋದ್ಯಮ ಟ್ರ್ಯಾಕರ್ ಸ್ಕ್ಯಾನ್ ಲಿಕ್ ಅಂದಾಜಿಸಿದೆ.
ಉದ್ಯಮ ವಿಶ್ಲೇಷಕರಿಂದ ನಿರಾಶಾದಾಯಕ ಸಾಧನೆ ಎಂದು ಬಣ್ಣಿಸಲ್ಪಟ್ಟಿದ್ದರೂ, ಚಿತ್ರದ ನಿರ್ಮಾಪಕರು ಮಾತ್ರ ಆಶಾಭಾವನೆಯನ್ನು ಹೊಂದಿದ್ದಾರೆ. ಜಾಗತಿಕವಾಗಿ ಸಿಕಂದರ್ ಚಿತ್ರದ ಒಟ್ಟು ಆದಾಯ 158.5 ಕೋಟಿ ರೂಪಾಯಿ ತಲುಪಿದೆ ಎಂದು ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ವಿವರಿಸಲಾಗಿದೆ. ಮೊದಲ ದಿನ ಭಾರತದಿಂದ 35.47 ಕೋಟಿ ಮತ್ತು ವಿಶ್ವದ ಇತರೆಡೆಗಳಲ್ಲಿ 19.25 ಕೋಟಿ ಸಂಗ್ರಹವಾಗಿದೆ. ಈದ್ ಹಬ್ಬದ ದಿನ ಭಾರತದಲ್ಲಿ 39.37 ಕೋಟಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 11.80 ಕೋಟಿ ರೂಪಾಯಿ ಗಳಿಸಿದೆ. 3 ಹಾಗೂ 4ನೇ ದಿನ ಒಟ್ಟಾರೆ ಸಂಗ್ರಹ ಕ್ರಮವಾಗಿ 35.26 ಕೋಟಿ ಹಾಗೂ 17.35 ಕೋಟಿ ಆಗಿದೆ ಎಂದು ವಿವರಿಸಿದೆ.
"ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮಗೆ ಸರ್ವಸ್ವ. ಸಿಕಂದರ್ ನಿಮ್ಮಿಂದಾಗಿ ಮುನ್ನುಗ್ಗುತ್ತಿದೆ. ಧನ್ಯವಾದಗಳು" ಎಂದು ಚಿತ್ರ ನಿರ್ಮಾಪಕರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.