IPL 2025 | ಸನ್‍ರೈಸರ್ಸ್ ವಿರುದ್ಧ ಕೆಕೆಆರ್ ಗೆ 80 ರನ್ ಗಳ ಭರ್ಜರಿ ಜಯ

Update: 2025-04-03 23:01 IST
IPL 2025 | ಸನ್‍ರೈಸರ್ಸ್ ವಿರುದ್ಧ ಕೆಕೆಆರ್ ಗೆ 80 ರನ್ ಗಳ ಭರ್ಜರಿ ಜಯ

Photo credit: X/@IPL

  • whatsapp icon

ಕೋಲ್ಕತಾ, ಎ.3: ಎ. ರಘುವಂಶಿ(50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್)ಹಾಗೂ ವೆಂಕಟೇಶ್ ಅಯ್ಯರ್(60 ರನ್, 29 ಎಸೆತ, 7 ಬೌಂಡರಿ,3 ಸಿಕ್ಸರ್)ಅರ್ಧಶತಕದ ಕೊಡುಗೆ, ವೈಭವ್ ಅರೋರ(3-29)ಹಾಗೂ ವರುಣ್ ಚಕ್ರವರ್ತಿ(3-22) ಅವರ ಅಮೋಘ ಬೌಲಿಂಗ್ ನೆರವಿನಿಂದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್ ಅಂತರದಿಂದ ಮಣಿಸಿತು.

ಗುರುವಾರ ನಡೆದ 15ನೇ ಐಪಿಎಲ್ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 200 ರನ್ ಗಳಿಸಿದೆ. ಗೆಲ್ಲಲು 201 ರನ್ ಗುರಿ ಪಡೆದಿದ್ದ ಸನ್ರೈಸರ್ಸ್ ತಂಡ ಯಾವ ಹಂತದಲ್ಲೂ ಹೋರಾಟವನ್ನೇ ನೀಡದೆ 16.4 ಓವರ್ಗಳಲ್ಲಿ 120 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.

44 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡ ಸನ್ರೈಸರ್ಸ್ ಆರಂಭಿಕ ಆಘಾತದಿಂದ ಹೊರಬರುವಲ್ಲಿ ವಿಫಲವಾಯಿತು. ಹೆನ್ರಿಕ್ ಕ್ಲಾಸೆನ್(33 ರನ್, 21 ಎಸೆತ),ಕಮಿಂದು ಮೆಂಡಿಸ್(27 ರನ್, 20 ಎಸೆತ)ಹಾಗೂ ನಿತಿಶ್ ರೆಡ್ಡಿ(19 ರನ್) ಒಂದಷ್ಟು ಹೋರಾಟ ನೀಡಿದರೂ ಇದು ಗೆಲುವಿಗೆ ಸಾಕಾಗಲಿಲ್ಲ.

ಸ್ಪಿನ್ನರ್ ವರುಣ್ ಚಕ್ರವರ್ತಿ ಹಾಗೂ ವೈಭವ್ ತಲಾ 3 ವಿಕೆಟ್ಗಳನ್ನು ಪಡೆದರೆ, ಆಂಡ್ರೆ ರಸೆಲ್(2-21) ಎರಡು ವಿಕೆಟ್ ಪಡೆದರು.ಹರ್ಷಲ್ ಪಟೇಲ್(3 ರನ್)ವಿಕೆಟನ್ನು ಪಡೆದು ಸನ್ರೈಸರ್ಸ್ ಇನಿಂಗ್ಸ್ಗೆ ರಸೆಲ್ ತೆರೆ ಎಳೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ತಂಡವು 2.3 ಓವರ್ಗಳಲ್ಲಿ 16 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಕ್ವಿಂಟನ್ ಡಿಕಾಕ್(1 ರನ್)ಹಾಗೂ ಸುನೀಲ್ ನರೇನ್(7 ರನ್) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 3ನೇ ವಿಕೆಟ್ಗೆ 81 ರನ್ ಜೊತೆಯಾಟದಲ್ಲಿ ಭಾಗಿಯಾದ ನಾಯಕ ಅಜಿಂಕ್ಯ ರಹಾನೆ(38 ರನ್, 27 ಎಸೆತ, 1 ಬೌಂಡರಿ, 4 ಸಿಕ್ಸರ್)ಹಾಗೂ ರಘುವಂಶಿ ತಂಡವನ್ನು ಆಧರಿಸಿದರು. ರಘುವಂಶಿ ತನ್ನ 2ನೇ ಅರ್ಧಶತಕವನ್ನು ಬಾರಿಸಿದರು.

ವೆಂಕಟೇಶ್ ಅಯ್ಯರ್ ಹಾಗೂ ರಿಂಕು ಸಿಂಗ್(ಔಟಾಗದೆ 32 ರನ್, 17 ಎಸೆತ, 4 ಬೌಂಡರಿ, 1 ಸಿಕ್ಸರ್) 5ನೇ ವಿಕೆಟ್ಗೆ 41 ಎಸೆತಗಳಲ್ಲಿ 91 ರನ್ ಜೊತೆಯಾಟ ನಡೆಸುವ ಮೂಲಕ ಕೆಕೆಆರ್ ತಂಡವು ಬರೋಬ್ಬರಿ 200 ರನ್ ಗಳಿಸುವಲ್ಲಿ ನೆರವಾದರು.

ಕಮಿನ್ಸ್ ಎಸೆದ 19ನೇ ಓವರ್ನಲ್ಲಿ 1 ಸಿಕ್ಸರ್, 3 ಬೌಂಡರಿಗಳ ಸಹಿತ 21 ರನ್ ಗಳಿಸಿದ ವೆಂಕಟೇಶ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

15 ಓವರ್ಗಳ ಅಂತ್ಯಕ್ಕೆ ಕೆಕೆಆರ್ 122 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು. ಸನ್ರೈಸರ್ಸ್ಗೆ ಕೆಕೆಆರ್ರನ್ನು 180ರೊಳಗೆ ನಿಯಂತ್ರಿಸುವ ಅವಕಾಶ ಇತ್ತು. ಆದರೆ ಅದು ತನ್ನ ಹಿಡಿತ ಕಳೆದುಕೊಂಡಿತು.

ಸನ್ರೈಸರ್ಸ್ ಪರವಾಗಿ ಮುಹಮ್ಮದ್ ಶಮಿ(1-29), ಕಮಿಂದು ಮೆಂಡಿಸ್(1-4), ಝೀಶನ್ ಅನ್ಸಾರಿ(1-25), ಹರ್ಷಲ್ ಪಟೇಲ್(1-43) ಹಾಗೂ ಪ್ಯಾಟ್ ಕಮಿನ್ಸ್(1-44)ತಲಾ ಒಂದು ವಿಕೆಟ್ಗಳನ್ನು ಪಡೆದರು.

ಟಾಸ್ ಜಯಿಸಿದ ಸನ್ರೈಸರ್ಸ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಆಯ್ದುಕೊಂಡರು. ಸನ್ರೈಸರ್ಸ್ ತಂಡದ ಪರ ಆಡುವ 11ರ ಬಳಗಕ್ಕೆ ವಿಯಾನ್ ಮುಲ್ದರ್ ಬದಲಿಗೆ ಶ್ರೀಲಂಕಾದ ಕಮಿಂದು ಮೆಂಡಿಸ್ ಆಡಿದರು. ಮೆಂಡಿಸ್ಗೆ ಚೊಚ್ಚಲ ಐಪಿಎಲ್ ಪಂದ್ಯವಾಗಿದೆ. ಟ್ರಾವಿಸ್ ಹೆಡ್ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದು ವಿಫಲರಾದರು.

ಸಂಕ್ಷಿಪ್ತ ಸ್ಕೋರ್

ಕೆಕೆಆರ್: 20 ಓವರ್ಗಳಲ್ಲಿ 200/6

(ವೆಂಕಟೇಶ್ ಅಯ್ಯರ್ 60, ಎ.ರಘುವಂಶಿ 50, ಅಜಿಂಕ್ಯ ರಹಾನೆ 38, ರಿಂಕು ಸಿಂಗ್ ಔಟಾಗದೆ 32, ಮುಹಮ್ಮದ್ ಶಮಿ 1-29)

ಸನ್ರೈಸರ್ಸ್ ಹೈದರಾಬಾದ್:16.4 ಓವರ್ಗಳಲ್ಲಿ 120 ರನ್ಗೆ ಆಲೌಟ್

(ಕ್ಲಾಸೆನ್ 33, ಕಮಿಂದು ಮೆಂಡಿಸ್ 27,ನಿತಿಶ್ ರೆಡ್ಡಿ 19, ವೈಭವ್ ಅರೋರ 3-29, ವರುಣ್ ಚಕ್ರವರ್ತಿ 3-22, ರಸೆಲ್ 2-21)

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News