ಆರ್‌ಬಿಐ ಹಣಕಾಸು ನೀತಿ: ರೆಪೋ ದರದಲ್ಲಿ ಯಥಾಸ್ಥಿತಿ

Update: 2024-10-09 10:26 GMT

Photo: PTI

ಹೊಸದಿಲ್ಲಿ: ಆರ್‌ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಬುಧವಾರ ಪ್ರಕಟಿಸಿದ್ದು, ಸತತ 10ನೇ ಸಲವೂ ರೆಪೋ ದರವನ್ನು ಶೇ.6.5ರ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ಆರ್‌ಬಿಐನ ಈ ನಿರ್ಧಾರವು ಹಬ್ಬದ ಋತುವಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪೂರಕವಾಗಿದೆ. ಬಡ್ಡಿದರಗಳು ಸ್ಥಿರವಾಗಿರುವುದರಿಂದ ಹಾಲಿ ಮತ್ತು ಭವಿಷ್ಯದ ಮನೆಮಾಲಿಕರಿಗೆ ಈಗಿನ ಇಎಂಐಗಳೇ ಮುಂದುವರಿಯಲಿವೆ, ಇದು ವಿಶೇಷವಾಗಿ ಹಬ್ಬಗಳ ಋತುವಿನಲ್ಲಿ ಹೆಚ್ಚಿನ ಮನೆ ಮಾರಾಟಗಳಿಗೆ ನೆರವಾಗಲಿದೆ.

ರಿಯಲ್ ಎಸ್ಟೇಟ್ ಮಾರಾಟಗಳಿಗೆ ಪ್ರಮುಖ ಸಮಯವಾಗಿರುವ ಹಬ್ಬಗಳ ಋತುವಿನ ಮುನ್ನ ದರಕಡಿತವು ಕಡಿಮೆ ಬಡ್ಡಿದರಗಳೊಂದಿಗೆ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪುನಃಶ್ಚೇತನಗೊಳಿಸಲು ಸುವರ್ಣಾವಕಾಶವನ್ನು ನೀಡುತ್ತಿತ್ತು ಎಂದು ಕೆಲವು ತಜ್ಞರು ಅಭಿಪ್ರಾಯಿಸಿದ್ದಾರೆ.

ಗೃಹಸಾಲ ದರಗಳ ಯಥಾಸ್ಥಿತಿಯು ಪ್ರಸಕ್ತ ಹಬ್ಬಗಳ ಋತುವಿನಲ್ಲಿ ಹೆಚ್ಚು ಅಗತ್ಯವಿದ್ದ ಬೆಂಬಲವನ್ನು ಒದಗಿಸಿದೆ. ಬದಲಾಗದ ಬಡ್ಡಿದರಗಳು ಮಾರಾಟವನ್ನು ಹೆಚ್ಚಿಸುವಲ್ಲಿ ಮತ್ತು ಗತಿಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಅನರಾಕ್ ಗ್ರೂಪ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದರು.

ಜಾಗತಿಕ ತಲ್ಲಣಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತೀಯ ಆರ್ಥಿಕತೆಯ ಬುನಾದಿಯು ಸದೃಢವಾಗಿದ್ದು,ಹಣದುಬ್ಬರವೂ ನಿಯಂತ್ರಣದಲ್ಲಿರುವುದರಿಂದ ರೆಪೋದರಗಳನ್ನು ಶೇ.6.5ರಲ್ಲಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧರಿಸಿದೆ. ಇದು ಹಬ್ಬಗಳ ಋತುವಿನಲ್ಲಿ ಮಾರಾಟ ಗತಿಯನ್ನು ಕಾಯ್ದುಕೊಳ್ಳಲು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ನೆರವಾಗಲಿದೆ. ರೆಪೊ ದರ ಕಡಿತವು ಅಪೇಕ್ಷಿತವಾಗಿದ್ದರೂ ಆರ್‌ಬಿಐ ಸಮತೋಲನ ಕಾಯ್ದುಕೊಳ್ಳುವ ಯತ್ನದಲ್ಲಿದೆ ಮತ್ತು ಅದು ವಿವಿಧ ಸ್ಥೂಲ-ಆರ್ಥಿಕ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಮನೆ ಖರೀದಿದಾರರ ದೃಷ್ಟಿಕೋನದಲ್ಲಿ, ತುಲನಾತ್ಮಕವಾಗಿ ಕೈಗೆಟಕುವ ಗೃಹಸಾಲ ಬಡ್ಡಿದರಗಳು ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ನಿರ್ಣಾಯಕವಾಗಿರುವ ಹಬ್ಬಗಳ ಋತುವಿನಲ್ಲಿ ಮುಂದುವರಿಯುತ್ತದೆ. 2024ರ ತೃತೀಯ ತ್ರೈಮಾಸಿಕದಲ್ಲಿ ಪ್ರಮುಖ ಏಳು ನಗರಗಳಲ್ಲಿ ಮನೆಗಳ ಸರಾಸರಿ ಬೆಲೆಗಳು ಶೇ.23ರಷ್ಟು ಏರಿಕೆಯಾಗಿವೆ. 2023ರ ತೃತೀಯ ತ್ರೈಮಾಸಿಕದಲ್ಲಿ ಪ್ರತಿ ಚದರಡಿಗೆ 6,800 ರೂ.ಗಳಿದ್ದ ಸರಾಸರಿ ದರವು 2024ರ ತೃತೀಯ ತ್ರೈಮಾಸಿಕ ಅಂತ್ಯದಲ್ಲಿ 8,390 ರೂ.ಗೆ ಏರಿದೆ.

2024ರ ತೃತೀಯ ತ್ರೈಮಾಸಿಕದಲ್ಲಿ ಬೆಲೆಗಳು ಏರಿಕೆಯಾಗಿದ್ದರೂ ಮನೆಗಳ ಮಾರಾಟ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ನೂತನ ವಸತಿ ಯೋಜನೆಗಳೂ ಶೇ.19ರಷ್ಟು ಕುಸಿದಿದ್ದವು.

ಇಂಡಿಯಾ ಜೆಎಲ್‌ಎಲ್‌ನ ಮುಖ್ಯ ಆರ್ಥಿಕ ತಜ್ಞ ಸಮಂತಕ ದಾಸ್ ಪ್ರಕಾರ, ಬಡ್ಡಿದರ ಕಡಿತವು ಹಬ್ಬಗಳ ಋತುವಿನಲ್ಲಿ ಕಡಿಮೆ ಬಡ್ಡಿದರಗಳೊಂದಿಗೆ ಮನೆ ಖರೀದಿದಾರರಿಗೆ ಹೆಚ್ಚಿನ ಹುಮ್ಮಸ್ಸು ನೀಡುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅನುಕೂಲಕರವಾಗುತ್ತಿತ್ತು. ಆದರೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವುದು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಪ್ರಸಕ್ತ ಮಾರಾಟ ಗತಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News