ಹಿಂದಿ ಬಳಕೆಗೆ ವಿರೋಧ: ಕೇಂದ್ರ ಸಚಿವರಿಗೆ ಮಲಯಾಳಂನಲ್ಲಿ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

Update: 2024-11-04 10:45 GMT

ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ (Photo: PTI) 

ಹೊಸದಿಲ್ಲಿ: ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೇಂದ್ರ ಸಚಿವ ರವನೀತ್ ಸಿಂಗ್ ಅವರ ಹಿಂದಿಯಲ್ಲಿನ ಪ್ರತಿಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತ ಪ್ರತಿಭಟನೆಯ ಭಾಗವಾಗಿ ಮಲಯಾಳಂನಲ್ಲಿ ಸಚಿವರಿಗೆ ಪತ್ರ ಬರೆದಿದ್ದಾರೆ.

ಮೇಲ್ಮನೆಯ ಶೂನ್ಯ ವೇಳೆಯಲ್ಲಿ ಕೇಳಲಾದ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಹೆಚ್ಚಿನ ಬೋಗಿಗಳ ಅಗತ್ಯತೆ ಮತ್ತು ರೈಲುಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಬ್ರಿಟ್ಟಾಸ್ ಗೆ  ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಹಿಂದಿಯನ್ನು ಬಳಸಿದ್ದಾರೆ. ಇದು ದಕ್ಷಿಣ ಭಾರತದ ಸಂಸದರಿಗೆ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸುವ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಬ್ರಿಟ್ಟಾಸ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳ ಸಂಸದರಿಗೆ ಬರೆಯುವ ಪತ್ರಗಳನ್ನು ಇಂಗ್ಲಿಷ್ ನಲ್ಲಿ ಬರೆಯುವುದು ರೂಢಿ ಮತ್ತು ಪೂರ್ವ ನಿದರ್ಶನವಾಗಿದೆ. ಆದರೆ ಇತ್ತೀಚೆಗೆ ಅದು ಬದಲಾಗಿದೆ, ರವನೀತ್ ಸಿಂಗ್ ಹಿಂದಿಯಲ್ಲಿ ಬರೆದಿದ್ದಾರೆ. ಆದ್ದರಿಂದ ಅವರಿಗೆ ಮಲಯಾಳಂನಲ್ಲಿ ಉತ್ತರಿಸಲು ನಾನು ಒತ್ತಾಯಿಸಿದ್ದೇನೆ ಎಂದು ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಬ್ರಿಟ್ಟಾಸ್ ಹೇಳಿದ್ದಾರೆ.

ಕೇರಳವು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಿಲ್ಲ. ಅಧಿಕೃತ ಭಾಷೆಗಳ ಕಾಯ್ದೆಯ ನಿಬಂಧನೆಗಳ ಪ್ರಕಾರ, ಕೇಂದ್ರ ಸರ್ಕಾರದ ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಸಂಸತ್ತಿನಲ್ಲಿ ವ್ಯವಹಾರದ ವಹಿವಾಟುಗಳಿಗೆ ಇಂಗ್ಲಿಷ್ ಅನ್ನು ಬಳಸಬೇಕೆಂದು ಉಲ್ಲೇಖಿಸುತ್ತದೆ. ಹಿಂದಿಯನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸದ ಯಾವುದೇ ರಾಜ್ಯಗಳ ನಡುವೆ ಸಂವಹನಕ್ಕೆ ಕೇಂದ್ರ ಸರಕಾರ ಇಂಗ್ಲಿಷ್ ಅನ್ನು ಬಳಸಬೇಕೆಂದು ಕಾನೂನು ಹೇಳುತ್ತದೆ ಎಂದು ಹೇಳಿದ್ದಾರೆ.

ಹಿಂದಿಯಲ್ಲಿ ಮಾತ್ರ ಸಂವಹನ ನಡೆಸುವ ಇತ್ತೀಚಿನ ಈ ಬೆಳವಣಿಗೆಯು ಶಾಸನಬದ್ಧ ಭಾಷಾ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಮತ್ತು ಪರಿಣಾಮಕಾರಿ ಸಂವಹನಕ್ಕೆ ಅಡ್ಡಿಯುಂಟು ಮಾಡುತ್ತದೆ. ಈ ಸಮಸ್ಯೆ ನನಗೆ ಮಾತ್ರವಲ್ಲ, ದಕ್ಷಿಣದ ರಾಜ್ಯಗಳ ಇತರ ಸಂಸದರ ಮೇಲೂ ಪರಿಣಾಮ ಬೀರುತ್ತದೆ ಎಂದು ಬ್ರಿಟ್ಟಾಸ್ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News